೨೫ ದಿನಗಳ ಹಿಂದೆಯೇ ದೇವಸ್ಥಾನಕ್ಕೆ ತೆರಳಿದ ಮುಸ್ಲಿಂ ಕುಟುಂಬ ಗರುಡೋತ್ಸವ ಸೇವೆ ಮಾಡಿಸಲು ಹೆಸರು ನೋಂದಾಯಿಸಿದೆ.
ಕನಕಗಿರಿ: ಗಂಗಾವತಿ ಸಮೀಪದ ಬಸಾಪಟ್ಟಣದ ಮುಸ್ಲಿಂ ಕುಟುಂಬವೊಂದು ಪಟ್ಟಣದ ಮುಜರಾಯಿ ಇಲಾಖೆಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ಶನಿವಾರ ಗರುಡೋತ್ಸವ ಸೇವೆ ಸಲ್ಲಿಸಿದೆ.
ಕಳೆದ ೧೫ ವರ್ಷಗಳ ಹಿಂದಿನ ಇಷ್ಟಾರ್ಥ ಸಿದ್ಧಿಯಾಗಿದ್ದು, ಈಗ ಈ ಕುಟುಂಬದವರೆಲ್ಲರೂ ಸೇರಿಕೊಂಡು ಕನಕಾಚಲಪತಿ ಸನ್ನಿಧಾನದಲ್ಲಿಯೇ ಗರುಡೋತ್ಸವ ಸೇವೆ ಮಾಡಿರುವ ಮೂಲಕ ಈ ವಿಶಿಷ್ಟ ಹರಕೆ ತೀರಿಸಿದ್ದಾರೆ. ೨೫ ದಿನಗಳ ಹಿಂದೆಯೇ ದೇವಸ್ಥಾನಕ್ಕೆ ತೆರಳಿದ ಮುಸ್ಲಿಂ ಕುಟುಂಬ ಗರುಡೋತ್ಸವ ಸೇವೆ ಮಾಡಿಸಲು ಹೆಸರು ನೋಂದಾಯಿಸಿದೆ. ಮುಸ್ಲಿಂ ಕುಟುಂಬದವರಿಂದ ಕನಕಾಚಲಪತಿ ದೇಗುಲದಲ್ಲಿ ಗರುಡೋತ್ಸವ ಸೇವೆ ಹಮ್ಮಿಕೊಂಡಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ.
ಮುಸ್ಲಿಂ ಎನ್ನುವುದನ್ನು ಮರೆತ ಈ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಸಂಕಲ್ಪ, ಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇನ್ನೂ ಕಾರ್ಯಕ್ರಮದ ಮುಕ್ತಾಯದ ನಂತರವೂ ಹಿಂದೂ ಸಂಪ್ರದಾಯದಂತೆ ಶೇಷವಸ್ತ್ರ ಧರಿಸಿ ತೀರ್ಥ, ಪ್ರಸಾದ ಸ್ವೀಕರಿಸಿದ ಮುಸ್ಲಿಂ ಕುಟುಂಬ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಈ ವೇಳೆ ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಅರ್ಚಕ ವಿಜಯಪ್ರಸಾದ, ಪ್ರದೀಪ, ಮುಸ್ಲಿಂ ಕುಟುಂಬದ ಹೊನ್ನೂರುಹುಸೇನ ಆರುಬೆರಳಿನ್, ಫಾತಿಮಾ, ಮರ್ದಾನಬಿ, ಹೊನ್ನಮ್ಮ, ಹುಸೇನಬೀ, ಪೀರಮ್ಮ, ಅಲ್ಲಾಬಿ, ಅಬ್ದುಲ್ ಕಲಾಂ ಆರುಬೆರಳಿನ್, ರೊಡ್ಡಸಾಬ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.