ರಾಜ್ಯಾದ್ಯಂತ ಶ್ರದ್ಧಾಭಕ್ತಿಯಿಂದ ಬಕ್ರೀದ್‌ ಆಚರಿಸಿದ ಮುಸ್ಲಿಮರು

KannadaprabhaNewsNetwork |  
Published : Jun 08, 2025, 02:32 AM IST
ಬಕ್ರೀದ್‌ ಆಚರಣೆ  | Kannada Prabha

ಸಾರಾಂಶ

ರಾಜ್ಯಾದ್ಯಂತ ಶನಿವಾರ ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಶನಿವಾರ ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಬೆಳಗ್ಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಂದ ಈದ್ಗಾ ಮೈದಾನಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಧರ್ಮ ಗುರುಗಳು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ, ಪುನಃ ಆವರಿಸಿರುವ ಕೊರೋನಾ ಆತಂಕ ನಿವಾರಣೆ ಆಗಲಿ ಎಂದು ಕೋರಿ ಕೊಂಡರು. ಬಳಿಕ, ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಮ್ಮ ಹಿರಿಯರ ಗೋರಿಗಳಿಗೆ ಹೂ ಹಾಕಿ ಪ್ರಾರ್ಥನೆ ಸಲ್ಲಿಸಿದರು.

ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ಆರ್‌ಸಿಬಿ ಸಂಭ್ರಮಾಚರಣೆ ದಿನ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಲಾಯಿತು.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ನಮಾಜ್‌ ವೇಳೆ ಸಚಿವ ಜಮೀರ್‌ ಅಹಮದ್ ಅವರು ವೇದಿಕೆಗೆ ಬಾರದೆ ರಸ್ತೆಯಲ್ಲೇ ಕುಳಿತು ನಮಾಜ್‌ ಮಾಡಿದರು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶನಿವಾರ ಮೃತಪಟ್ಟಿದ್ದ ಮಗುವಿನ ಶವ ಇಟ್ಟು ಅದಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಲಾಯಿತು. ಕೊಪ್ಪಳದ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಭಾಗಿಯಾಗಿದ್ದರು. ಬಕ್ರೀದ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬಕ್ರೀದ್‌ ಹಿನ್ನೆಲೆಯಲ್ಲಿ ಎಲ್ಲೆಡೆ ಕುರಿ, ಮೇಕೆಗಳ ವ್ಯಾಪಾರ ಕೂಡ ಜೋರಾಗಿತ್ತು. ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಶುಕ್ರವಾರ ನಡೆದ ಕುರಿ ಸಂತೆಯಲ್ಲಿ 10 ಕೋಟಿ ರು.ಗಳ ವ್ಯಾಪಾರ ವಹಿವಾಟು ನಡೆದಿದೆ. ಕುರಿಗಳು 5 ಸಾವಿರದಿಂದ 40 ಸಾವಿರ ರು.ವರೆಗೂ ಮಾರಾಟವಾಗಿವೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ