ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಮುಸ್ಲಿಮರು ಅರ್ಚಕರಿಂದ ಗಣಪತಿಗೆ ವಿಶೇಷ ಪೂಜೆ ಮಾಡಿಸಿ ತಾವೂ ಸಹ ಗಣೇಶನಿಗೆ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನದಾನ, ಸಿಹಿ ವಿತರಿಸಿ ಗಮನ ಸೆಳೆದಿದ್ದಾರೆ.ಗ್ರಾಮದ ಶ್ರೀಗಜಪಡೆ ಯುವಕರ ಬಳಗವು ಮುಖ್ಯ ರಸ್ತೆಯಲ್ಲಿ ಪ್ರತಿ ವರ್ಷದಂತೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಿಕೊಂಡು ಬರುತ್ತಿದ್ದು, ಪ್ರತಿ ದಿನ ಒಂದೊಂದು ಕುಟುಂಬದವರು ಪೂಜೆ ಜವಾಬ್ದಾರಿ ವಹಿಸಿಕೊಂಡು ಪೂಜೆ ಪುನಸ್ಕಾರ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.
ಅದರಂತೆ ಗ್ರಾಮದ ಮುಸ್ಲಿಂ ಸಮಾಜದ ಮುಖಂಡರಾದ ಇರ್ಫಾನ್ ಪಾಷಾ, ಮುಸ್ತಾಕ್, ರಾಜಿಕ್, ಸಿದ್ದಿಕ್, ಝಾಕೀರ್, ಶಫಿಕ್, ಇಮ್ರಾನ್ ಮತ್ತಿತರರ ನೇತೃತ್ವದಲ್ಲಿ ಹಿಂದೂ ಅರ್ಚಕರ ಮೂಲಕ ಗಣೇಶನಿಗೆ ಹೂವಿನ ಅಲಂಕಾರ ಮಾಡಿ, ಹಣ್ಣು-ಕಾಯಿ, ಮೋದಕ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಸಿಹಿ ವಿತರಣೆ ಪ್ರಸಾದ ವಿತರಿಸಿದ್ದು ವಿಶೇಷವಾಗಿತ್ತು.ಈ ವೇಳೆ ಮಾತನಾಡಿದ ಇರ್ಫಾನ್ ಪಾಷ, ದೇವರು ಒಬ್ಬನೇ ನಾಮ ಹಲವು ಎಂಬ ನಾಣ್ಣುಡಿಯಂತೆ ದೇವರನ್ನು ಹಿಂದೂಗಳು ಈಶ್ವರ, ಮುಸ್ಲಿಮರು ಅಲ್ಲಾ, ಕ್ರೈಸ್ತರು ಏಸು ಎಂಬ ಹೆಸರಿನಲ್ಲಿ ಕರೆಯುತ್ತೇವೆ. ಆದರೆ, ದೇವರು ಒಬ್ಬನೇ ಆಗಿದ್ದಾನೆ. ಎಲ್ಲಾ ಧರ್ಮಗಳ ಸಾರವಾಗಿರುತ್ತದೆ ಎಂದರು.
ಭಗವಂತನ ಮೂಲಕ ನಾವು ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಶಾಂತಿ- ನೆಮ್ಮದಿ, ಸಹಬಾಳ್ವೆಯಿಂದ ಜೀವನ ನಡೆಸಬೇಕೆಂಬ ಸಾರವನ್ನು ಭಗವದ್ಗೀತೆ, ಕುರಾನ್, ಬೈಬಲ್ ತಿಳಿಸಿಕೊಡುತ್ತವೆ. ಆದರೂ ಕೆಲವರು ಪರಸ್ಪರ ಧ್ವೇಷ ಅಸೂಯೆ ಬೆಳೆಸಿಕೊಂಡು ಸಮಾಜದಲ್ಲಿ ಶಾಂತಿ-ನೆಮ್ಮದಿಗೆ ಭಂಗಕ್ಕೆ ಕಾರಣರಾಗುತ್ತಿದ್ದಾರೆ ಎಂದು ವಿಷಾದಿಸಿದರು.ರಾಜಕಾರಣಿಗಳು ಇದರ ಲಾಭ ಪಡೆದುಕೊಳ್ಳಲು ಬಿಡದೇ ನಾವೇ ಎಚ್ಚರಿಕೆಯಿಂದ ಇರಬೇಕು. ಗೌರಿಗಣೇಶ ಮೆರವಣಿಗೆಗೆ ಮುಸ್ಲಿಂಮರು ಪೂರ್ಣ ಸಹಕಾರ ನೀಡಬೇಕು. ಬಾಬಯ್ಯನ ಹಬ್ಬ, ಮೊಹರಂ ಹಬ್ಬ, ಈದ್ ಮಿಲಾದ್ ಹಬ್ಬಗಳಿಗೆ ಹಿಂದೂಗಳು ಸಹಕಾರ ನೀಡಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.