ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ
ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಷಯ ವಿವಾದದ ಕೇಂದ್ರ ಬಿಂದುವಾದ ಹುಬ್ಬಳ್ಳಿಯಲ್ಲೇ ಹಿಂದೂ-ಮುಸ್ಲಿಂ, ಕ್ರಿಶ್ಚಿಯನ್‌ರು ಸೇರಿ ಎಲ್ಲ ಧರ್ಮದವರೂ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಸಹೋದರತ್ವ, ಸೌಹಾರ್ದದ ಸಂದೇಶ ಸಾರುತ್ತಿದ್ದಾರೆ.ಇಲ್ಲಿಯ ರಾಮನಗರದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು ಸೇರಿದಂತೆ ಸರ್ವ ಸಮುದಾಯದವರು ಕಳೆದ ನಾಲ್ಕು ವರ್ಷದಿಂದ ಒಂದಾಗಿ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಇಲ್ಲಿನ ಮುಸ್ಲಿಂ, ಕ್ರೈಸ್ತ ಸಮುದಾಯದ ಜನ ಕರ್ಪೂರ ಬೆಳಗಿ, ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಅನ್ನ ಸಂತರ್ಪಣೆ ಕಾರ್ಯದಲ್ಲಿ ಮುಂದೆ ನಿಂತು ಎಲ್ಲ ಕಾರ್ಯಗಳನ್ನೂ ಮಾಡುತ್ತಾರೆ. ಇನ್ನು ಹಿಂದೂಗಳೂ ಕ್ರೈಸ್ತರ, ಮುಸ್ಲಿಮರ ಹಬ್ಬಗಳಲ್ಲಿ ಪಾಲ್ಗೊಂಡು ಭಾತೃತ್ವ ಮೆರೆಯುತ್ತಿದ್ದಾರೆ.
ರಾಮನಗರ ಒಂದು ಚಿಕ್ಕ ಭಾರತವಿದ್ದಂತೆ. ಇಲ್ಲಿ ಎಲ್ಲರೂ, ಎಲ್ಲ ಭಾಷೆ ಮಾತನಾಡುವ ಜನರಿದ್ದಾರೆ. ನಾವು ಎಲ್ಲರೂ ಸೇರಿ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ನಮಗೆ ಜಾತಿ-ಮತ-ಪಂಥದ ಹಂಗಿಲ್ಲ. ನಾವು ಆಚರಿಸುವ ಹಬ್ಬಗಳು ಪರಸ್ಪರ ಎಲ್ಲರನ್ನೂ ಸೇರಿಸುವ ಆಚರಣೆಗಳಾಗಬೇಕು. ಅದೇ ನಿಟ್ಟಿನಲ್ಲಿ 4 ವರ್ಷಗಳ ಹಿಂದೆ ಸರ್ವಧರ್ಮ ಸೇವಾ ಸಮಿತಿ ರಚಿಸಿ ಅದರಡಿ ಗಜಾನನ ಉತ್ಸವ ಸಮಿತಿಯಿಂದ ಗಣೇಶ ಪ್ರತಿಷ್ಠಾಪಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ.ಈ ಸರ್ವಧರ್ಮ ಸಮಿತಿಗೆ ಚಂದ್ರಕಾಂತ ಯಾದವ ಅಧ್ಯಕ್ಷ. ಸೀಲನ್ ಝೇವಿಯರ್ ಮತ್ತು ಅನ್ವರ ಪಠಾಣ್ ಉಪಾಧ್ಯಕ್ಷರು. ರಾಜಣ್ಣ ವಂದಾಲ, ಹನುಮಂತ ಚಲವಾದಿ, ರಾಮು ಯಾದಗಿರಿ, ಮೋಜಸ್ ಪ್ರಾಂಚಿಸ್ ಇಬ್ರಾಹಿಂ ಹೊಸಪೇಟೆ, ಸಂತೋಷ ಚಲುವಾದಿ ಪದಾಧಿಕಾರಿಗಳು. ಎಲ್ಲ ಹಬ್ಬಗಳಲ್ಲೂ ಇವರು ಮುಂದೆ ನಿಂತು ಪೂಜೆ-ಪುನಸ್ಕಾರ, ಸಾಂಸ್ಕೃತಿಕ ಚಟುವಟಿಕೆ, ಅನ್ನಸಂತರ್ಪಣೆ ಸೇರಿದಂತೆ ಎಲ್ಲ ಕಾರ್ಯ ನಿಭಾಯಿಸುತ್ತಾರೆ.
ಇಲ್ಲಿನ ಯುವಕರು ಹಬ್ಬಗಳಲ್ಲಿ ಅಡುಗೆ ಸಿದ್ಧತೆ, ಅನ್ನಸಂತರ್ಪಣೆ, ಶಾಮಿಯಾನ ಹಾಕುವುದು ಸೇರಿ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಾರೆ.ಮೂರ್ತಿ ಪ್ರತಿಷ್ಠಾಪಿಸಿದ ಮಾರನೇ ದಿನದಿಂದ 10 ದಿನ ವಿವಿಧ ಸಮುದಾಯದ ಜನರು ತಮ್ಮ ಸಂಪ್ರದಾಯದಂತೆ ಅನ್ನಸಂತರ್ಪಣೆ ಮಾಡುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಯ ಗಣೇಶೋತ್ಸವ ಜನಪ್ರಿಯವಾಗುತ್ತ ಸಾಗಿದ್ದು, ಬೇರೆ ಪ್ರದೇಶದ ಜನ ಇಲ್ಲಿಗೆ ಬಂದು ವೀಕ್ಷಣೆ ಮಾಡುತ್ತಾರೆ.
ಮೊದಲು ಹನ್ನೊಂದು ಗಣಪತಿ2022ಕ್ಕೂ ಮೊದಲು ರಾಮನಗರದ ವಿವಿಧೆಡೆ 11 ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆಗಲೂ ಎಲ್ಲಡೆ ಎಲ್ಲರೂ ಒಂದಾಗಿಯೇ ಗಣೇಶೋತ್ಸವ ಆಚರಿಸುತ್ತಿದ್ದರು. 2022ರಲ್ಲಿ ಇಲ್ಲಿನ ಪಾಲಿಕೆ ಸದಸ್ಯ ಸಂತೋಷ ಚಲುವಾದಿ ಮತ್ತು ಸತೀಶ್ ಚಲುವಾದಿ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಹಬ್ಬ ಆಚರಿಸುತ್ತೇವೆ. ಹೀಗಾಗಿ, 11 ಸ್ಥಳದಲ್ಲಿ ಮಾಡದೇ ಎಲ್ಲರೂ ಒಂದೇ ಸ್ಥಳದಲ್ಲಿ ಪ್ರತಿಷ್ಠಾಪಿಸೋಣ ಎಂದು ನಿರ್ಧರಿಸಿ ಅಂದಿನಿಂದ ಒಂದೇ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ರಾಮನಗರದಲ್ಲಿ ನಮ್ಮ ನೋಟಿನಲ್ಲಿರುವ ಎಲ್ಲ ಭಾಷೆ ಮಾತನಾಡುವ ಜನರು ವಾಸಿಸುತ್ತೇವೆ. ನಮ್ಮಲ್ಲಿ ಜಾತಿ-ಧರ್ಮ ಎನ್ನುವ ಭೇಧ-ಭಾವವಿಲ್ಲ. ಎಲ್ಲರೂ ಸೇರಿ ಹಬ್ಬ ಆಚರಿಸುತ್ತೇವೆ. ಕ್ರಿಸ್‌ಮಸ್, ರಂಜಾನ್ ಸೇರಿ ಎಲ್ಲ ಹಬ್ಬಗಳಲ್ಲಿ ನಾವು ಸಹೋದರರಂತೆ ಪಾಲ್ಗೊಳ್ಳುತ್ತೇವೆ ಎಂದು ಇಬ್ರಾಹಿಂ ಹೊಸಪೇಟೆ ಸೀಲನ್ ಝೇವಿಯರ್ ಸಂತೋಷ ಚಲವಾದಿ ಹೇಳಿದ್ದಾರೆ.