ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಚುನಾವಣೆಯ ಮಸ್ಟರಿಂಗ್ ಕಾರ್ಯ ಉಜಿರೆಯ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ತಾಲೂಕಿನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 79, ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 63, ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 25 , ವೇಣೂರು ಠಾಣೆ ವ್ಯಾಪ್ತಿಯಲ್ಲಿ 51 ಉಪ್ಪಿನಂಗಡಿ ಠಾಣೆಯ ವ್ಯಾಪ್ತಿಯಲ್ಲಿ 23 ಮತಗಟ್ಟೆಗಳಿವೆ. ಇದರಲ್ಲಿ 25 ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳು 12 ಸೂಕ್ಷ್ಮ ಮತಗಟ್ಟೆಗಳು ಇವೆ.
ತಾಲೂಕಿಗೆ ಓರ್ವ ಡಿವೈಎಸ್ ಪಿ, ನಾಲ್ವರು ಇನ್ಸ್ ಪೆಕ್ಟರ್ ಗಳು, 15 ಸಬ್ ಇನ್ಸ್‌ಪೆಕ್ಟರ್‌ಗಳು, ಒಂದು ಅರಸೇನಾಪಡೆ, ಒಂದು ಕೆಎಸ್‌ಆರ್‌ಪಿ ಸ್ ಆರ್ ಪಿ ತುಕಡಿ, ಗೃಹ ರಕ್ಷಕ ದಳ ಸೇರಿದಂತೆ 400 ಪೊಲೀಸರು ಹಾಗೂ 1,156 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಒಂದು ಮತಗಟ್ಟೆಗೆ 7 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗೆ ಓರ್ವ ಹೆಚ್ಚುವರಿ ಸಿಬ್ಬಂದಿ ಇರುತ್ತಾರೆ. ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಉಜಿರೆ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದರು. ಇಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಬಾಂಜಾರು ಮಲೆ, ಎಳನೀರು ಸೇರಿದಂತೆ ತಾಲೂಕಿನ ದುರ್ಗಮ ಮತಗಟ್ಟೆ, ಸೂಕ್ಷ್ಮ ಮತಗಟ್ಟೆ, ನಕ್ಸಲ್ ಭಾದಿತ ಪ್ರದೇಶಗಳ ಕಡೆ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಟ್ಟ ಸಿಬ್ಬಂದಿಗೆ ಯಾವುದೇ ರೀತಿಯ ಆತಂಕ ಬೇಡ ಎಲ್ಲ ಪೂರ್ವ ತಯಾರಿಗಳು ಸುಸೂತ್ರವಾಗಿರುವ ಕುರಿತು ಧೈರ್ಯ ತುಂಬಿದರು. ಊಟೋಪಚಾರ ವ್ಯವಸ್ಥೆ, ವಿಶೇಷ ಮತಗಟ್ಟೆಗೆ ಭೇಟಿ ನೀಡಿದರು. ತಹಸೀಲ್ದಾರ್ ಪೃಥ್ವಿ ಸಾನಿಕಂ, ಉಪಚುನಾವಣಾ ಅಧಿಕಾರಿ ಕೆಂಪೇಗೌಡ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಅಂಚೆ ಮತದಾನ: ಚುನಾವಣೆ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಏಪ್ರಿಲ್ 21 ಹಾಗೂ 22 ರಂದು ತಾಲೂಕು ಕೇಂದ್ರದಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು ಆ ವೇಳೆ 102 ಮತಗಳು ಮಾತ್ರ ಚಲಾವಣೆಯಾಗಿದ್ದವು.
ತಾಲೂಕಿನಲ್ಲಿ ಒಟ್ಟು 180 ಅಂಚೆ ಮತದಾರರು ಮತದಾನಕ್ಕೆ ನೋಂದಾಯಿಸಿದ್ದು ಇದರಲ್ಲಿ 161 ಮಂದಿಗೆ ಮಾತ್ರ ಬೆಳ್ತಂಗಡಿಯಲ್ಲಿ ಮತದಾನ ಮಾಡುವ ಅವಕಾಶವಿತ್ತು. 52 ಮತದಾರರು ಗುರುವಾರ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನ ನಡೆಸುವ ಮೂಲಕ ಒಟ್ಟು 155 ಮಂದಿ ಮತದಾನ ನಡೆಸಿದರು.ತಾಲೂಕಿನಲ್ಲಿ ಚುನಾವಣೆಯ ಪೂರ್ವ ತಯಾರಿ ಉತ್ತಮವಾಗಿ ನಡೆದಿದೆ ಸಿಬ್ಬಂದಿಗೆ ಅಗತ್ಯ ಸವಲತ್ತು ನೀಡಲಾಗಿದೆ. ತೀರ ಹಿಂದುಳಿದ ಭಾಗಗಳಿಗೆ ಓರ್ವ ಹೆಚ್ಚಿನ ಅಧಿಕಾರಿ, ಹೆಚ್ಚುವರಿ ಮತಯಂತ್ರ ನೀಡಲಾಗಿದೆ. ತಾಲೂಕಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವವರಲ್ಲಿ ಮಹಿಳೆಯರೇ ಅಧಿಕವಾಗಿ ಅವರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮತಗಟ್ಟೆಗಳಲ್ಲಿ ವಿದ್ಯುತ್ ವ್ಯವಸ್ಥೆ ಉಂಟಾಗದಂತೆ ಮೆಸ್ಕಾಂ ಇಲಾಖೆಗೆ ಹೆಚ್ಚುವರಿ ತಂಡಗಳನ್ನು ರಚಿಸುವಂತೆ ಸೂಚಿಸಲಾಗಿದೆ. ಮತಯಂತ್ರಗಳಲ್ಲಿ ದೋಷ ಕಂಡು ಬಂದರೆ ಅಂತಹ ಕಡೆಗೆ ಬದಲಿ ಮತಯಂತ್ರಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಮತದಾರನು ತಪ್ಪದೇ ಚುನಾವಣೆ ಮಾಡಬೇಕು
- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ