ಮುತ್ತಗಿ ಪ್ರಕರಣ: ಗ್ರಾಮಕ್ಕೆ ಅಧಿಕಾರಿಗಳ ದೌಡು, ಪಿಡಿಒ ಅಮಾನತು

KannadaprabhaNewsNetwork | Published : Oct 26, 2024 1:01 AM

ಸಾರಾಂಶ

ಹೊಸ ಬೋರ್‌ವೆಲ್‌ ನೀರು ಸೇವಿಸಿ ವಾಂತಿ-ಭೇದಿಯಿಂದ ನರಳುತ್ತಿದ್ದ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ಇಲ್ಲಿಗೆ ತೆರಳಿದ ಅಧಿಕಾರಿಗಳು, ಚಿಕಿತ್ಸೆಗೆ ಬಂದಿರುವ ಮತ್ತು ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ವಿಚಾರಿಸಿದರು.

ಕಲಘಟಗಿ:

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ತಾಲೂಕಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಗಿ ಗ್ರಾಮಸ್ಥರ ಆರೋಗ್ಯವನ್ನು ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ., ಡಿಎಚ್‌ಒ ಹಾಗೂ ಎಸ್ಪಿ ಗೋಪಾಲ ಬ್ಯಾಕೋಡ ಭೇಟಿ ನೀಡಿ ವಿಚಾರಿಸಿದರು. ಜತೆಗೆ ಗ್ರಾಮಕ್ಕೆ ತೆರಳಿ ಸಾರ್ವಜನಿಕರ ಯೋಗಕ್ಷೇಮ ವಿಚಾರಿಸಿದರು.

ತಾತ್ಕಾಲಿಕ ಆಸ್ಪತ್ರೆಗೆ ಭೇಟಿ:

ಹೊಸ ಬೋರ್‌ವೆಲ್‌ ನೀರು ಸೇವಿಸಿ ವಾಂತಿ-ಭೇದಿಯಿಂದ ನರಳುತ್ತಿದ್ದ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ಇಲ್ಲಿಗೆ ತೆರಳಿದ ಅಧಿಕಾರಿಗಳು, ಚಿಕಿತ್ಸೆಗೆ ಬಂದಿರುವ ಮತ್ತು ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯ ವಿಚಾರಿಸಿದರು.

ಚಿಕಿತ್ಸೆ, ಔಷಧಿ ಸಕಾಲಕ್ಕೆ ಮತ್ತು ಉತ್ತಮ ರೀತಿಯಲ್ಲಿ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು. ಪ್ರಿಯಾಂಕಾ ಜೊಗನ್ನವರ (45), ಯಲ್ಲವ್ವ ಮೂಶನ್ನವರ (70) ಮತ್ತು ಕವಿತಾ ಪಾಟೀಲ (34) ಅವರ ಯೋಗಕ್ಷೇಮ ವಿಚಾರಿಸಿ ಗುಣಮುಖವಾಗಲಿದೆ ಎಂದು ಧೈರ್ಯ ತುಂಬಿದರು.

ನಂತರ ಕಲುಷಿತ ನೀರು ಸರಬರಾಜು ಆಗಿರುವ ಬೋರ್‌ವೆಲ್‌ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೇಲ್ಮಟ್ಟದ ಜಲಸಂಗ್ರಹಗಾರ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.

ವಾಂತಿ-ಭೇದಿ ಪೀಡಿತರ ಗೌಡರ ಓಣಿ ಮತ್ತು ಕುರಬರ ಓಣಿಗಳಿಗೆ ಭೇಟಿ ನೀಡಿ, ಮನೆ-ಮನೆ ಆರೋಗ್ಯ ಜಾಗೃತಿ ಮೂಡಿಸಿ, ಸ್ವಚ್ಛ ನೀರು, ಕಾಯಿಸಿ ಆರಿಸಿದ ನೀರು ಸೇವನೆ ಬಗ್ಗೆ ತಿಳಿವಳಿಕೆ ನೀಡಿದರು. ಜಿಲ್ಲಾಡಳಿತ, ಅಧಿಕಾರಿಗಳು ನಿಮ್ಮೊಂದಿಗೆ ಇದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದರು.

46 ಪ್ರಕರಣ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಗ್ರಾಮದಲ್ಲಿ ಅ. 23ರಂದು 10, 24ರಂದು 26 ವಾಂತಿ-ಭೇದಿ ಪ್ರಕರಣ ದಾಖಲಾಗಿವೆ. ಇದರಲ್ಲಿ 18 ಜನ ಪುರಷರು, 18 ಜನ ಮಹಿಳೆಯರು ಹಾಗೂ 10 ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತೀವ್ರ ಸ್ವರೂಪದ 10 ರೋಗಿಗಳನ್ನು ಹುಬ್ಬಳ್ಳಿಯ ಕೆಸಿಎಂಆರ್‌ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಗಳಗಿ, ಹುಲಕೊಪ್ಪದಲ್ಲಿ ಹಾಗೂ ಕಲಘಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ತುರ್ತುಚಿಕಿತ್ಸಾ ಘಟಕ ಪ್ರಾರಂಭಿಸಿದ್ದು ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದಾರೆ ಎಂದರು. ಗ್ರಾಮದಲ್ಲಿ ಒಟ್ಟು 339 ಮನೆಗಳಿದ್ದು ಇದರಲ್ಲಿ ಗೌಡರ ಓಣಿ ಮತ್ತು ಕುರುಬರ ಓಣಿಯ 215 ಮನೆಗಳಿಗೆ ಮಾತ್ರ ಒಂದು ಓವರ್‌ ಹೆಡ್‌ ಟ್ಯಾಂಕಿನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರು ಸೇವಿಸಿದವರಲ್ಲಿ ಮಾತ್ರ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದರು.

ಕಾರಣವೇನು?:

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಇತ್ತೀಚೆಗೆ ಹೊಸ ಬೋರ್‌ವೆಲ್‌ ಕೊರೆಸಲಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ಮಳೆ ನೀರು ಬೋರ್‌ವೆಲ್‌ ಸೇರಿದೆ. ಇದೇ ನೀರನ್ನು ಕ್ಲೋರಿನೇಷನ್‌ ಮಾಡದೆ ಸರಬರಾಜು ಮಾಡಿದ್ದರಿಂದ ಈ ಘಟನೆ ಜರುಗಿದೆ ಎಂದು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಹೆಲೋಜಿನ್ ಮಾತ್ರ:

ಈ ಘಟನೆ ಜರುಗುತ್ತಿದ್ದಂತೆ ಮುನ್ನಚ್ಚರಿಕಾ ಕ್ರಮವಾಗಿ ಗ್ರಾಮದ ಎಲ್ಲ ಮನೆಗಳಿಗೂ ಹೆಲೋಜಿನ್ ಮಾತ್ರೆ ನೀಡಲಾಗಿದೆ. ಗ್ರಾಮದಲ್ಲಿ ಡಂಗೂರ ಸಾರಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಲಾಗಿದೆ. ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ರೋಗ ನಿಯಂತ್ರಣ ಬರುವರೆಗೆ ತುರ್ತು ಪರಿಸ್ಥಿತಿ ಹೊರತುಪಡಿಸಿ ರಜೆ ಮೇಲೆ ತೆರಳದೆ ಕೇಂದ್ರಸ್ಥಾನಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಸಮಸ್ಯೆ ಉಲ್ಬಣಿಸದಂತೆ ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಜಾಗೃತಿ ತಂಡ ರಚನೆ:

ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರ ತಂಡ ರಚಿಸಿ, ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲು ಸೂಚಿಸಲಾಗಿದೆ. ಹುಬ್ಬಳ್ಳಿಯ ಕೆಎಂಸಿಆರ್‌ಐ ಹಾಗೂ ತಾಲೂಕಾಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಮಾಡಲಾಗಿದೆ ಎಂದು ಡಿಸಿ, ಇದರೊಂದಿಗೆ ವಾಂತಿ-ಭೇದಿ ಪ್ರಕರಣದ ಬಗ್ಗೆ ಕಾರಣ ತಿಳಿಯಲು ಕೆಸಿಎಂಆರ್‌ಐನಿಂದ ಒಂದು ರ್‍ಯಾಪಿಡ್‌ ಟಾಸ್ಕ್ ತಂಡ ರಚಿಸಲಾಗಿದೆ ಎಂದರು.

ಡಿಸಿಗೆ ಲಾಡ್‌ ಪೋನ್‌ ಕಾಲ್‌:

ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ದೂರವಾಣಿ ಕರೆ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಪ್ರಕರಣ ಉಲ್ಬಣಿಸದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ಈ ವೇಳೆ ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ತಹಸೀಲ್ದಾರ್‌ ವೀರೇಶ ಮುಳಗುಂದಮಠ, ಆರ್‌ಎಚ್‌ಒ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ತವ್ಯ ಲೋಪ; ಪಿಡಿಒ ಅಮಾನತು

ಮುತ್ತಗಿಯಲ್ಲಿ ಹೊಸ್‌ ಬೋರ್‌ವೆಲ್‌ ನೀರು ಸೇವಿಸಿ ನೂರಾರು ಜನರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸೆಗಿದ ಪಿಡಿಒ ಪ್ರವೀಣಕುಮಾರ ಗಣಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಎಸ್‌. ಆದೇಶ ಹೊರಡಿಸಿದ್ದಾರೆ.

ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ವಾಂತಿ-ಭೇದಿಯಿಂದ ಬಳಲುತ್ತಿದ್ದರು. ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಹಾಗೂ ಕುಡಿಯುವ ನೀರಿಗೆ ಕ್ಲೋರಿನೇಷನ್ ಮಾಡಿ ಸ್ವಚ್ಛ ಹಾಗೂ ಶುದ್ಧ ನೀರನ್ನು ಜನರಿಗೆ ಒದಗಿಸುವಲ್ಲಿ ಪಿಡಿಒ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷತೆ ವಹಿಸಿದ್ದರಿಂದ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ತಕ್ಷಣ ಜಾರಿಗೆ ಬರುವಂತೆ ಪಿಡಿಒ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತಿನಲ್ಲಿರಿಸಿ ಜಿಪಂ ಸಿಇಒ ಆದೇಶಿಸಿದ್ದಾರೆ. ಇವರ ಕಾರ್ಯವನ್ನು ಬೇರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪ್ರಭಾರ ವಹಿಸುವಂತೆ ತಾಪಂ ಇಒಗೆ ಸೂಚಿಸಿದ್ದಾರೆ.

Share this article