ಮಡಿಕೇರಿ: ‘ಮುತ್ತು ಬಂದಿದೆ ಕೇರಿಗೆ’ ರಸ ಗ್ರಹಣ ಶಿಬಿರ

KannadaprabhaNewsNetwork |  
Published : May 20, 2025, 01:09 AM IST
ಚಿತ್ರ :  18ಎಂಡಿಕೆ1 : ಮುತ್ತು ಬಂದಿದೆ ಕೇರಿಗೆ ರಸ ಗ್ರಹಣ ಶಿಬಿರದ ಉದ್ಘಾಟನೆ.  | Kannada Prabha

ಸಾರಾಂಶ

ಕನಕದಾಸರು ಒಬ್ಬ ಭಕ್ತ, ಆದರೆ ಕೇವಲ ಭಕ್ತ ಮಾತ್ರ ಅಲ್ಲ. ಅವರು ಒಬ್ಬ ವಿಚಾರವಾದಿ ಮತ್ತು ಕವಿಯೂ ಆಗಿದ್ದರು ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿಯಲ್ಲಿ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಮುತ್ತು ಬಂದಿದೆ ಕೇರಿಗೆ ಎಂಬ ರಸ ಗ್ರಹಣ ಶಿಬಿರ ನಡೆಯಿತು.

ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಕನಕದಾಸರು ಒಬ್ಬ ಭಕ್ತ, ಆದರೆ ಕೇವಲ ಭಕ್ತ ಮಾತ್ರ ಅಲ್ಲ, ಅವರು ಒಬ್ಬ ವಿಚಾರವಾದಿ ಮತ್ತು ಕವಿಯೂ ಆಗಿದ್ದರು ಹರಿದಾಸ ಪರಂಪರೆಯಲ್ಲಿ 150 ಜನ ಹರಿದಾಸರು ಬಂದು ಹೋಗಿದ್ದಾರೆ. ಭಕ್ತಿಯನ್ನು ಸಾಮಾಜಿಕ ಸುಧಾರಣೆಗೆ, ಜ್ಞಾನೋಪಾಸನೆಗೆ ಬಳಸಿಕೊಂಡ ಕೀರ್ತನಾಕಾರರು ಯಾರಾದರೂ ಇದ್ದರೆ ಅದರಲ್ಲಿ ಮೊದಲು ನಿಲ್ಲುವವರು ಕನಕದಾಸರು ಮತ್ತು ಪುರಂದರದಾಸರು. ಭಕ್ತಿಯನ್ನು ಇಂದು ಬೀದಿಯ ಸರಕನ್ನಾಗಿ ನಾವು ನೋಡುತ್ತಿದ್ದೇವೆ. ವಾಸ್ತವವಾಗಿ ಅದು ಆತ್ಮನಿವೇದನೆಗೆ, ಸಾಮಾಜಿಕ ಬದುಕಿನಲ್ಲಿ ಸಂಸ್ಕಾರವನ್ನು ಮೂಡಿಸುವುದಕ್ಕೆ ಅಗತ್ಯ ಎಂದರು.

ಪ್ರಾಂಶುಪಾಲ ಮೇಜರ್ ಡಾ.ರಾಘವ ಬಿ. ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ದಾಸರಲ್ಲಿ ಶ್ರೇಷ್ಠರು ಕನಕದಾಸರು. ಇವರು ಒಬ್ಬ ತತ್ವಜ್ಞಾನಿ, ಕವಿ ಮತ್ತು ಸಂಗೀತಗಾರರೂ ಕೂಡ ಆಗಿದ್ದರು. ಯಾರೇ ಅಗಿರಲಿ ಭಕ್ತಿ ಇದ್ದರೆ ಅವರಿಗೆ ದೇವರು ಒಲಿಯುತ್ತಾನೆ. ಮಾನವತಾವಾದಿಯಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.

ವಿಶೇಷ ಉಪನ್ಯಾಸಕ ಡಾ.ಪುರುಷೋತ್ತಮ ಡಿ. ಮಾತನಾಡಿ, ಕನಕದಾಸರ ಚಿಂತನೆಗಳ ಜೊತೆಗೆ ನಮ್ಮ ಇಡೀ ಭಾರತದ ಚರಿತ್ರೆಯನ್ನು ಗಮನಿಸಿದಾಗ ಇಬ್ಬರು ನಮಗೆ ಬಹಳ ಮುಖ್ಯರಾಗುತ್ತಾರೆ. ಅದರಲ್ಲಿ ಒಬ್ಬ ಅಶೋಕ. ಯುದ್ಧವನ್ನು ನಿರಾಕರಿಸಿದ ಮಹಾನ್ ಚಕ್ರವರ್ತಿ. ಕಳಿಂಗ ಯುದ್ಧದ ರಕ್ತಪಾತ ನೋಡಿ ಯುದ್ಧ ಬೇಡವೆಂದು ನಿರ್ಧರಿಸಿ ಬೌದ್ಧ ಧರ್ಮದ ಚಿಂತನೆಗಳನ್ನು ಅಳವಡಿಸಿಕೊಂಡು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದವ ಎಂದರು.

ಅದೇ ರೀತಿ ಕರ್ನಾಟಕಕ್ಕೆ ಬಂದಾಗ ರಾಜಮನೆತನದ ವರ್ಚಸ್ಸು, ಅಧಿಕಾರ ಎಲ್ಲ ಇದ್ದ ಕನಕದಾಸ ಇನ್ನೊಬ್ಬ ಎಂದರು. ಕನಕದಾಸರು ಕೂಡಾ ಶಾಂತಿ ಅನುಭವ ಆಗಬೇಕಾದರೆ ಯುದ್ಧದ ದುಷ್ಪರಿಣಾಮಗಳ ಅರಿವಿರಬೇಕು. ಎಲ್ಲಾ ವೃತ್ತಿಗಳ ಮೂಲ ಉದ್ದೇಶ ಮನುಷ್ಯನ ಮುಲಭೂತ ಆವಶ್ಯಕತೆಗಳಲ್ಲದೆ ಬೇರೇನಿಲ್ಲ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ದಾಸರ ಕೀರ್ತನೆಯ ಸಾರ ಇದು. ಮಾಹಿತಿ ಇದ್ದರೆ ಸಾಲದು ಜ್ಞಾನ ಇರಬೇಕು. ನಮ್ಮೊಳಗಿನ ನಾನು ತ್ವವನ್ನು ಕಳೆದುಕೊಳ್ಳುವುದು ಬಹಳ ಮುಖ್ಯ. ನಾನೇ ಎಂಬ ಅಹಂ ಇರಬಾರದು. ನಮ್ಮಲ್ಲಿ ಬಾಗುವ ಗುಣ ಇರಬೇಕು. ನನ್ನೊಳಗೂ ಸ್ವೀಕರಿಸುವ ಗುಣ ಇರಬೇಕು ಆಗ ನಾನು ತ್ವ ಹೋಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಪೂಣಚ್ಚ ಸ್ವಾಗತಿಸಿದರು.

ಡಾ.ಮಹಾಲಕ್ಷ್ಮಿ ಟಿ.ಎಸ್. ವಂದಿಸಿದರು. ವಿದ್ಯಾರ್ಥಿನಿ ಸಪ್ನ ಎಂ.ಶೇಟ್ ಪ್ರಾರ್ಥಿಸಿ, ವಿದ್ಯಾರ್ಥಿನಿ ವರ್ಷ ನಿರೂಪಿಸಿದರು. ಕನ್ನಡ ವಿಭಾಗದ ಅಧ್ಯಾಪಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ