ಶ್ರೀಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ : ಶಾಸಕ ಬಸನಗೌಡ ಪಾಟೀಲ ಯತ್ನಾಳ

KannadaprabhaNewsNetwork |  
Published : Apr 07, 2025, 12:37 AM ISTUpdated : Apr 07, 2025, 12:28 PM IST
ಸಸಸಸಸ | Kannada Prabha

ಸಾರಾಂಶ

ಬಸವ ಜಯ ಮೃತ್ಯುಂಜಯ ಶ್ರೀಗಳು ನನ್ನ ಪರವಾಗಿ ಮಾತನಾಡಿರುವುದರಲ್ಲಿ ತಪ್ಪೇನಿದೆ?. ಶ್ರೀಗಳು ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಸೇರಿದಂತೆ ಹಲವರ ಪರ ಮಾತನಾಡಿದ್ದಾರೆ

ಹುಬ್ಬಳ್ಳಿ: ಶ್ರೀಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ. ನಾನು ಒಳ್ಳೆಯವರಿಗೆ ಒಳ್ಳೆಯವನು, ದುಷ್ಟರಿಗೆ ದುಷ್ಟ. ಕುಟುಂಬದಿಂದ ಪಕ್ಷ ಮುಕ್ತವಾದರೆ ಮಾತ್ರ ನಾನು ಬಿಜೆಪಿಗೆ ಹೋಗುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಅವರು ಭಾನುವಾರ ಇಲ್ಲಿನ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರುಸಾವಿರ ಮಠದ ಶ್ರೀಗಳ ಆಶೀರ್ವಾದ ಪಡೆದು, ಸಿದ್ದೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಿದ್ದೇಶ್ವರ ಶಿವಾನುಭವ ಮಂಟಪ, ಯಾತ್ರಿನಿವಾಸ ಸೇರಿದಂತೆ ಅನೇಕ ಕಾರ್ಯ ಮಾಡಿದ್ದು, ಆ ಕಾರ್ಯಕ್ರಮಕ್ಕೆ ಶ್ರೀಗಳನ್ನು ಆಹ್ವಾನಿಸಲು ಆಗಮಿಸಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.

ಶ್ರೀಗಳ ಹೇಳಿಕೆಯಲ್ಲಿ ತಪ್ಪೇನಿದೆ?: ಬಸವ ಜಯ ಮೃತ್ಯುಂಜಯ ಶ್ರೀಗಳು ನನ್ನ ಪರವಾಗಿ ಮಾತನಾಡಿರುವುದರಲ್ಲಿ ತಪ್ಪೇನಿದೆ?. ಶ್ರೀಗಳು ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಸೇರಿದಂತೆ ಹಲವರ ಪರ ಮಾತನಾಡಿದ್ದಾರೆ. ಆದರೆ, ಆಗ ಅವರ ಮಾತಿಗೆ ಇರದ ವಿರೋಧ ಈಗೇಕೆ. ಶ್ರೀಗಳ ವಿರುದ್ಧ ಮಾತನಾಡಿರುವುದು ಯಾವ ಟ್ರಸ್ಟ್?. ಆ ಟ್ರಸ್ಟಿನಲ್ಲಿರುವವರು ಪಂಚಮಸಾಲಿ ಪೀಠದ ಆಸ್ತಿಯನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎಲ್ಲಿಯ ವರೆಗೂ ಬಿಜೆಪಿ ಒಂದು ಕುಟುಂಬದಿಂದ ಮುಕ್ತಿ ಹೊಂದುವುದಿಲ್ಲವೋ ಅಲ್ಲಿಯ ವರೆಗೆ ನಾನು ಪಕ್ಷಕ್ಕೆ ಮರಳಿ ಹೋಗುವ ಪ್ರಶ್ನೆ ಉದ್ಭವಿಸಲ್ಲ. ಆ ಕುಟುಂಬ ಒಳ್ಳೆಯ ರೀತಿ ಇದ್ದಿದ್ದರೆ ನಾನು ಗೌರವ ಕೊಡುತ್ತಿದ್ದೆ. ಕುಟುಂಬದಿಂದ ಪಕ್ಷ ಮುಕ್ತವಾದರೆ ಬಿಜೆಪಿಗೆ ಹೋಗುತ್ತೇನೆ ಎಂದರು.

ವಿಜಯೇಂದ್ರ ರಾಜೀನಾಮೆ ನೀಡಲಿ: ಯತ್ನಾಳ್‌ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ ಎಂಬ ಎಂ.ಪಿ. ರೇಣುಕಾಚಾರ್ಯ ಹೇಳಿಕೆಗೆ ಉತ್ತರಿಸಿದ ಯತ್ನಾಳ, ಮೊದಲು ಬಿ.ವೈ. ವಿಜಯೇಂದ್ರ ರಾಜೀನಾಮೆ ನೀಡಲಿ. ಅವರು ಇನ್ನೊಬ್ಬರ ಭಿಕ್ಷೆಯ ಮೇಲೆ ಶಾಸಕರಾದವರು. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ, ವಿಜಯೇಂದ್ರ ಶಿಕಾರಿಪುರ ಕ್ಷೇತ್ರಕ್ಕೆ ರಾಜಿನಾಮೆ ನೀಡಲಿ. ನನಗೆ ಮುಸ್ಲಿಮರ ಮತಗಳು ಬೇಕಿಲ್ಲ, ಕೇವಲ ಭಗವಾ ಧ್ವಜದ ಮೇಲೆ ಚುನಾವಣೆ ಎದುರಿಸುವೆ. ಅವನಿಗೆ ದಮ್ ಇದೆಯಾ ಎಂದು ಸವಾಲು ಹಾಕಿದ ಯತ್ನಾಳ, ವಿಜಯೇಂದ್ರ ನೇರವಾಗಿ ಮಾತನಾಡಲಿ, ಹಂದಿಗಳ ಕಡೆಯಿಂದ ಹೇಳಿಕೆ ಕೊಡಿಸುವುದು ಬೇಡ. ಹಂದಿಗಳು ಯಾವಾಗಲೂ ಮನೆಯ ಹೊರಗಿರಬೇಕು. ಎಂದಿಗೂ ಅವುಗಳನ್ನು ಮನೆಯೊಳಗೆ ಕರೆದುಕೊಳ್ಳಬಾರದು ಎಂದು ರೇಣುಕಾಚಾರ್ಯ ಹೆಸರೇಳದೇ ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಉ.ಕ.ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಜೆಪಿಯವರು ಎಷ್ಟು ಜನ ಮುಖ್ಯಮಂತ್ರಿಯಾಗಿದ್ದಾರೆ ಅವರೆಲ್ಲ ಉತ್ತರ ಕರ್ನಾಟಕದವರಿಂದಲೇ ಆಗಿದ್ದಾರೆ. ನಮ್ಮ ಭಾಗದವರು ಮುಖ್ಯಮಂತ್ರಿಯಾಗಿದ್ದರು. ಆದರೆ, ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಲಿಲ್ಲ. ಆಲಮಟ್ಟಿ ಅಭಿವೃದ್ಧಿ ಪಡಿಸಬೇಕಿತ್ತು. ಸರ್ಕಾರ ಗ್ಯಾರಂಟಿ ಸಲುವಾಗಿ ಸಾಲ ಮಾಡುತ್ತಿದೆ. ಅದರ ಜತೆಗೆ ಕೃಷ್ಣಾ ಮೇಲ್ದಂಡೆಗೂ ಸಾಲ ತೆಗೆಯಿರಿ ಎಂದರು.

ರಾಜ್ಯದಲ್ಲಿ ಹಿಂದೂಗಳ ಕಗ್ಗೋಲೆಯಾಗುತ್ತಿದೆ. ಬಿಜೆಪಿ ಹೋರಾಟ ನಾಟಕೀಯವಾಗಿ ನಡೆದಿವೆ. ಬರೀ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ಕೈ ಬಿಡುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಹಿಂದೂಗಳ ರಕ್ಷಣೆಗೆ ಕಾನೂನು ಘಟಕ:ಶೀಘ್ರದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆ, ಅವರ ಪರ ಹೋರಾಟಕ್ಕೆ ಕಾನೂನು ಘಟಕ ತೆರೆಯಲಾಗುತ್ತಿದೆ. ಹಿಂದೂಗಳಿಗೆ ಅನ್ಯಾಯವಾದಾಗ ಅವರ ಪರ ವಾದ ಮಾಡಲು, ಅವರಿಗೆ ನ್ಯಾಯ ಕೊಡಿಸಲು ಕಾನೂನು ಘಟಕ ಕೆಲಸ ಮಾಡಲಿದೆ ಎಂದರು.

ಇಸ್ಲಾಂ ಹುಟ್ಟದ ಕಾಲದಲ್ಲಿನ ಮಠ ಮಾನ್ಯಗಳಿಗೆ ವಕ್ಫ್ ಎಂದು ಹಾಕಲಾಗಿತ್ತು. ನರೇಂದ್ರ ಮೋದಿ ಬಿಲ್ ತಂದು ಒಳಿತು ಮಾಡಿದ್ದಾರೆ ಎಂದರು.

ಸರ್ಕಾರಕ್ಕೆ ಆಸಕ್ತಿಯಿಲ್ಲ: ಹಿಂದೆ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಸರ್ಕಾರ ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದವರನ್ನು ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಚಾರ್ಜ್ ಮಾರ್ಗಸೂಚಿ ಬಿಟ್ಟು, ಮಾನವನ ಹಕ್ಕು ಉಲ್ಲಂಘನೆ ಮಾಡಿ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷವಿದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಬಿಜೆಪಿ ಸರ್ಕಾರ ಸಮಾಜಕ್ಕೆ 2ಡಿ ಮೀಸಲಾತಿ ನೀಡಿತ್ತು. ಆದರೆ, ಈಗೀನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಬದಲಿಗೆ ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರ ಮಾಡಿಲ್ಲ: ನಾನೇನು ಭ್ರಷ್ಟಾಚಾರ ಮಾಡಿಲ್ಲ. ಅಡ್ಡ ಮತದಾನ ಸಹ ಮಾಡಿಲ್ಲ. ಭ್ರಷ್ಟ ಕುಟುಂಬದ ಮಾತು ಕೇಳಿ ನನ್ನನ್ನ ಉಚ್ಚಾಟನೆ ಮಾಡಲಾಗಿದೆ. ಇಡೀ ಹಿಂದು ಸಮಾಜ ನನ್ನ ಪರವಾಗಿ ಹೋರಾಟ ಮಾಡುತ್ತಿದೆ. ನಾನು ಕೂಡಲಸಂಗಮದ ಶ್ರೀಗಳಿಗೆ ಹೋರಾಟ ಮಾಡಿ ಎಂದು ಹೇಳಿಲ್ಲ. ಸಮಾಜದ ವ್ಯಕ್ತಿಗಳಿಗೆ ಅನ್ಯಾಯ ಆದಾಗ ಶ್ರೀಗಳು ಹೋರಾಟ ಮಾಡಿದ್ದಾರೆ ಎಂದರು.

ನನ್ನ ಮೇಲೂ ಶತ್ರು ಸಂಹಾರ ಯಾಗ: ಈ ಹಿಂದೆ ಕೇರಳದಲ್ಲಿ ಶತ್ರು ಸಂಹಾರ ಯಾಗ ಮಾಡಿಸಿದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನವರ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತ್ತು. ಕೇರಳದ ಶತ್ರು ಸಂಹಾರ ಯಾಗಕ್ಕೂ ಸಿದ್ದರಾಮಯ್ಯನವರ ಕಾಲಿನ ಸಮಸ್ಯೆಗೂ ಸಂಬಂಧವಿದೆ. ನನ್ನ ಮೇಲೆಯೂ ಕೂಡ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯತ್ನಾಳ ಸಂಹಾರ ಪೂಜೆ ನಡೆದಿದೆ. ಆದರೆ, ಅದರಿಂದ ನನಗೆ ಏನೂ ಆಗಲ್ಲ. ಏಕೆಂದರೆ ಮಾಟ, ಮಂತ್ರ ಪ್ರಭಾವ ಬೀರಲ್ಲ ಎಂದು ನನ್ನ ಜಾತಕದಲ್ಲಿದೆ. ಈ ಹಿಂದೆ ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿಯೂ ಕೂಡ ನನ್ನ ಸಂಹಾರ ಪೂಜೆ ಆಗಿದೆ. ಪೂಜೆ ಮಾಡಿಸಿದ್ದು ಯಾರೆಂಬುದು ನನಗೆ ಗೊತ್ತಿದೆ. ಹಾಗಾಗಿ ಈಗ ಹುಬ್ಬಳ್ಳಿಗೆ ಬಂದು ಮಾತನಾಡುತ್ತಿದ್ದೇನೆ ಎಂದರು.

ನನ್ನ ಹೆಣ ಸಹ ಕಾಂಗ್ರೆಸ್ಸಿಗೆ ಹೋಗುವುದಿಲ್ಲ:ವಿಜಯ ದಶಮಿಯವರೆಗೆ ಕಾದು ನೋಡುವೆ. ತಪ್ಪಾಗಿದೆ ಎಂದು ಅವರಿವರ ಕೈಕಾಲು ಬಿದ್ದು ಘರ್ ವಾಪಸಾತಿ ಆಗುವುದಿಲ್ಲ. ಗೌರವಯುತವಾಗಿ ರಾಜಕೀಯ ಮಾಡುತ್ತೇನೆ. ಯಡಿಯೂರಪ್ಪರನ್ನು ಬಿಜೆಪಿಗೆ ವಾಪಸಾತಿ ಮಾಡಿಸಿದ್ದೆ ನಾನು. ಹೊಸ ಪಕ್ಷ ಕಟ್ಟೊದು ಸುಲಭವಲ್ಲ. ಆದರೆ ನನ್ನ ಅಜೆಂಡಾ ಬೇರೆಯೇ ಇದೆ. ಯಾರಿಗೋ ಹುಟ್ಟಿ ಯಾರಿಗೋ ಅಪ್ಪಾಜಿ ಎನ್ನುವ ಜಾಯಮಾನ ನನ್ನದಲ್ಲ ಎಂದರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!