ಹೊಸಪೇಟೆ: ನಗರಸಭೆಯಿಂದ ಕೇವಲ 5 ಕಿಮೀ ವ್ಯಾಪ್ತಿಯೊಳಗೆ ಆರ್ಬಿಎಸ್ಎಸ್ಎನ್ ಗಣಿ ಕಂಪನಿಗೆ 64.50 ಎಕರೆ ಜಮೀನನ್ನು 30 ವರ್ಷಗಳ ಕಾಲ ಮತ್ತೆ ಲೀಜ್ಗೆ ನೀಡಿ ರಾಜ್ಯ ಸಂಪುಟ ಸಭೆ ಅಂಗೀಕಾರ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆ ನಿರ್ಮಾಣದ ನನ್ನ ಕನಸು ನುಚ್ಚುನೂರಾಗಿದೆ ಎಂದು ಮಾಜಿ ಸಚಿವ ಆನಂದ ಸಿಂಗ್ ಹೇಳಿದರು.
ವಿಜಯನಗರ ಸಾಮ್ರಾಜ್ಯದ ಹೆಸರು ಉಳಿಯಲು ಹೊಸಪೇಟೆಯನ್ನು ನೂತನ ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದೆ, ವಿಜಯನಗರ ಜಿಲ್ಲೆ ಮಾಡುವಾಗಲೂ ಹೋರಾಟಗಾರರು ಅನೇಕ ಹೋರಾಟ ಮಾಡಿದ್ದರು. ನನ್ನ ಅಧಿಕಾರವಧಿಯಲ್ಲಿ ವಿಜಯನಗರ ಜಿಲ್ಲೆ ಆಗಲೇಬೇಕು ಎಂದು ಹಠ ಹಿಡಿದ ಕಾರಣ ವಿಜಯನಗರ ಜಿಲ್ಲೆ ರಚನೆಯಾಯಿತು. ಜಿಲ್ಲೆ ರಚನೆಯಾದಾಗಲೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲೇಬೇಕು ಎಂದುಕೊಂಡಿದ್ದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 80 ಎಕರೆ ಸಕ್ಕರೆ ಕಾರ್ಖಾನೆಗಾಗಿ ಜಮೀನು ಕಾಯ್ದಿರಿಸಲಾಗಿತ್ತು
ಈ 80 ಎಕರೆ ಜತೆಗೆ ಆರ್ಬಿಎಸ್ಎಸ್ಎನ್ ಅವರಿಗೆ ನೀಡಲಾಗಿದ್ದ 64.50 ಎಕರೆ ಜಮೀನು ಲೀಸ್ ಮುಗಿದ ಮೇಲೆ ಈ ಎರಡು ಜಮೀನು ಸೇರಿಸಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕನಸು ಕಟ್ಟಿಕೊಳ್ಳಲಾಗಿತ್ತು. ಆದರೆ ಆರ್ಬಿಎಸ್ಎಸ್ಎನ್ಗೆ ಮತ್ತೆ 30 ವರ್ಷಗಳ ಜಮೀನನ್ನು ಲೀಸ್ ನೀಡಿರುವುದರಿಂದ ಸಕ್ಕರೆ ಕಾರ್ಖಾನೆಗಾಗಿ ಕಂಡಿದ್ದ ನನ್ನ ಕನಸು ನುಚ್ಚುನೂರಾಯಿತು ಎಂದು ಬೇಸರ ವ್ಯಕ್ತಪಡಿಸಿದರು.ಕಾರಿಗನೂರು ಬಳಿ ಸಕ್ಕರೆ ಕಾರ್ಖಾನೆಗೆ ಸೂಕ್ತ ಪ್ರದೇಶವಾಗಿತ್ತು. ಈ ಪ್ರದೇಶವೂ ಈಗ ಕೈತಪ್ಪಿ ಹೋಗಿದೆ. ಇದರಿಂದ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದು ಅಷ್ಟು ಸುಲಭವಲ್ಲ. ಆದರೆ ಶಾಸಕ ಗವಿಯಪ್ಪ ಕಾಳಘಟ್ಟ ಬಳಿ ಸಕ್ಕರೆ ಕಾರ್ಖಾನೆಗೆ ಜಮೀನು ಗುರುತಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಕಾಳಘಟ್ಟ ಪ್ರದೇಶವು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಂದರೆ ಕಷ್ಟ. ಹಂಪಿ ಪ್ರಾಧಿಕಾರದವರು ಸಕ್ಕರೆ ಕಾರ್ಖಾನೆಗೆ ಪರವಾನಗಿ ನೀಡುತ್ತಾರೋ ನೋಡಬೇಕು. ಆದರೆ ಸಕ್ಕರೆ ಕಾರ್ಖಾನೆಯ ಬಗ್ಗೆ ಸ್ಥಳೀಯ ರೈತರು ಉಪವಾಸ ಸತ್ಯಾಗ್ರಹ ನಡೆಸಿದಾಗ ಶಾಸಕ ಗವಿಯಪ್ಪ ನ. 10ರಂದು ರೈತರಿಗೆ ಒಂದು ಒಳ್ಳೆ ಸುದ್ದಿ ನೀಡುತ್ತೇನೆ ಎಂದು ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ. ಅಂದಿನ ಸಭೆಗೆ ನನಗೂ ಆಹ್ವಾನ ಬಂದರೆ ಖಂಡಿತವಾಗಿಯೂ ಹೋಗುತ್ತೇನೆ. ಆ ದಿನಕ್ಕಾಗಿ ನಾನು ಕಾಯುತ್ತೇನೆ ಎಂದು ಹೇಳಿದರು.
ರಾಣಿ ಸಂಯುಕ್ತಾಗೆ ಬಿಜೆಪಿ ಟಿಕೆಟ್?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಣಿ ಸಂಯುಕ್ತಾ 15 ವರ್ಷ ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನಾನು ಸ್ಪರ್ಧಿಸಲ್ಲ ಎಂದು ಹೇಳಿದಾಗ ಸಿದ್ಧಾರ್ಥ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರು. ಸಿದ್ಧಾರ್ಥ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಾಗ ರಾಣಿ ಸಂಯುಕ್ತಾ ಕಾಂಗ್ರೆಸ್ಗೆ ಹೋಗಿದ್ದರು. ಕಾಂಗ್ರೆಸ್ನಲ್ಲಿಯೂ ಅವರಿಗೆ ಅನ್ಯಾಯವಾಗಿ ಮತ್ತೆ ಬಿಜೆಪಿಗೆ ಬಂದರೆ ಬಿಜೆಪಿ ಟಿಕೆಟ್ ಕೊಡಿಸಲು ಪ್ರಾಮಾಣಿಕ ಪ್ರಯತ್ನಿಸುವೆ. ಒಂದು ವೇಳೆ ರಾಣಿ ಸಂಯುಕ್ತಾ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದರೆ ನಾನು ಅವರ ವಿರುದ್ಧ ಸ್ಪರ್ಧೆ ಮಾಡುವೆ ಎಂದರು.