ಶಿಕ್ಷಕರ ಪರ ಸದನದ ಒಳಗೆ- ಹೊರಗೆ ನನ್ನ ಹೋರಾಟ ನಿರಂತರ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Aug 26, 2025, 01:03 AM IST
25ಕೆಎಂಎನ್ ಡಿ15 | Kannada Prabha

ಸಾರಾಂಶ

ಶಿಕ್ಷಕರನ್ನು ಸದೃಢಗೊಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಶಿಕ್ಷಕರಿಗೆ ಸಮಸ್ಯೆಗಳು ಉಲ್ಬಣಿಸಿದ ಸಂದರ್ಭದಲ್ಲಿ ನಾವು ಸದಾ ನಿಮ್ಮಪರವಾಗಿ ಸದನದ ಒಳಗೆ-ಹೊರಗೆ ಹೋರಾಟ ನಡೆಸಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಶಿಕ್ಷಕರು ಎದೆಗುಂದಬಾರದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಿಕ್ಷಕ ವೃತ್ತಿ ಪವಿತ್ರವಾದುದ್ದು. ಯಾವುದೇ ಸಮಸ್ಯೆ ಎದುರಾದರೂ ಶಿಕ್ಷಕರ ಪರವಾಗಿ ಸದನದ ಒಳಗೆ-ಹೊರಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಕಸಾಪ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ನಡೆದ ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದರೆ ಅದಕ್ಕೆ ಸರ್ಕಾರಗಳ ನೀತಿಗಳೇ ಕಾರಣ ಹೊರತು ಶಿಕ್ಷಕರಲ್ಲ. ಶಾಲೆಗಳಿಗೆ ಉನ್ನತೀಕರಣಗೊಳಿಸಿ ಅದಕ್ಕೆ ಬೇಕಿರುವ ಅಗತ್ಯ ಸೌಕರ್ಯ ಒದಗಿಸದ ಕಾರಣ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದರು.

ಶಿಕ್ಷಕರನ್ನು ಸದೃಢಗೊಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಶಿಕ್ಷಕರಿಗೆ ಸಮಸ್ಯೆಗಳು ಉಲ್ಬಣಿಸಿದ ಸಂದರ್ಭದಲ್ಲಿ ನಾವು ಸದಾ ನಿಮ್ಮಪರವಾಗಿ ಸದನದ ಒಳಗೆ-ಹೊರಗೆ ಹೋರಾಟ ನಡೆಸಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಶಿಕ್ಷಕರು ಎದೆಗುಂದಬಾರದು ಎಂದರು.

ನಾನು ಶಾಸಕನಾಗಿದ್ದಾಗ 12 ಪ್ರೌಢಶಾಲೆ, 5 ಪಿಯು ಹಾಗೂ 3 ಡಿಗ್ರಿ ಕಾಲೇಜು, ಪ್ರತಿ ಹೋಬಳಿಗೆ ವಸತಿ ಶಾಲೆ ಮಂಜೂರು ಮಾಡಿಸಿದ್ದೇನೆ. ಈಗ ಟಿ.ಎಸ್.ಛತ್ರ ಗ್ರಾಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರ ಹೆಸರಿನಲ್ಲಿ ಹೈಕೋರ್ಟ್ ಮಾದರಿಯಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸಭಾ ಭವನ ನಿರ್ಮಾಣ:

ಪಟ್ಟಣದ ಕಸಾಪ ಭವನ ರಾಜ್ಯದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭವನ ನಿರ್ಮಾಣ ಮಾಡುವಾಗ ಸಹಕಾರ ನೀಡಿದ್ದೇನೆ. ಭವನದ ಮೇಲೆ ಸಭಾ ಭವನ ನಿರ್ಮಾಣ ಮಾಡಿಸಿಕೊಡುವಂತೆ ಪರಿಷತ್ತಿನ ಅಧ್ಯಕ್ಷರು ಮನವಿ ಮಾಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ತಂದೆ-ತಾಯಿಯ ಹೆಸರಿನ ಎಸ್ ಟಿಜಿ ಟ್ರಸ್ಟ್ ವತಿಯಿಂದ ಕಸಾಪ ಭವನದ ಮೇಲ್ಬಾಗದಲ್ಲಿ ಸಭಾ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಮಾತನಾಡಿ, ಶಿಕ್ಷಕರ ಹಲವು ಬೇಡಿಕೆಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸುವ ಜತೆಗೆ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಚರ್ಚಿಸಲಾಗುತ್ತಿದೆ. ಶಿಕ್ಷಕರೊಂದಿಗೆ ನಾವು ಹೋರಾಟ ನಡೆಸಲಿದ್ದೇವೆ ಎಂದರು.

ಶಿಕ್ಷಕ ಮಾಣಿಕ್ಯನಹಳ್ಳಿ ಜಯರಾಮ್ ಅವರು ರಾಜ್ಯ ಸಂಘಟನ ಕಾರ್ಯದರ್ಶಿಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣ ಹೊಂದಿದ್ದಾರೆ ಎಂದು ಬಣ್ಣಿಸಿದರು.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಕೇಶಮೂರ್ತಿ ಮಾತನಾಡಿ, ಸರ್ಕಾರ ಶಿಕ್ಷಕರ ಹಲವು ಸಮಸ್ಯೆಗಳ, ಬೇಡಿಕೆ ಈಡೇರಿಸಬೇಕು. ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಬಡ್ತಿ ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಪಿಯು ಉಪನ್ಯಾಸಕರ ಹುದ್ದೆಗೆ ಪರೀಕ್ಷೆ ಬೇಡ ಹಾಗೂ ಹಿಂದಿ ಶಿಕ್ಷಣ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಸಮಾಜ ಸೇವಕ, ವಕೀಲ ಅರವಿಂದ್ ರಾಘವನ್ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಣಿಕ್ಯನಹಳ್ಳಿ ಜಯರಾಮ್ ಅವರನ್ನು ಅಭಿನಂಧಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ, ಮಾಜಿ ಅಧ್ಯಕ್ಷ ಎಚ್.ಕೆ.ಮಂಜುನಾಥ್, ಜಿಲ್ಲಾಧ್ಯಕ್ಷ ರಮೇಶ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಮೇಶ್, ಕಾರ್ಯದರ್ಶಿ ವಿಜಯಕುಮಾರ್, ದೈ.ಶಿ.ಸ.ಅಧ್ಯಕ್ಷ ಶಿವಕುಮಾರ್, ಖಜಾಂಚಿ ಯತ್ರೀಂದ್ರಕುಮಾರ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಸೇರಿದಂತೆ ಮಂಡ್ಯ, ಹಾಸನ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ