ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ಪಟ್ಟಣದ 23 ನೇ ವಾರ್ಡಿನ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ ಎಸ್.ಎಂ.ಕೃಷ್ಣ ಬಡಾವಣೆ ಹಾಗೂ ಕರಡಿಪುರದಲ್ಲಿ ಸಂಚಾರ ಮಾಡುವುದಕ್ಕೂ ಕಷ್ಟಕರವಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಅರಿತು ನಾನು ಶಾಸಕನಾದ ನಂತರ ಆದ್ಯತೆ ಮೇರೆಗೆ ರಸ್ತೆ , ಚರಂಡಿ, ವಿದ್ಯುತ್ ಹಾಗೂ ಕುಡಿವ ನೀರಿನ ಸಮಸ್ಯೆಯನ್ನು ಹಂತ ಹಂತವಾಗಿ ಪೂರೈಸಿದ್ದು, ಮುಂದಿನ ದಿನಗಳಲ್ಲಿ ಈ ವ್ಯಾಪ್ತಿ ಪ್ರದೇಶದ ಯಾವುದೇ ಸಮಸ್ಯೆಗಳು ಕಂಡು ಬಂದರೂ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ವಾರ್ಡಿನ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ಶುದ್ಧ ಕುಡಿವ ನೀರಿನ ಘಟಕ, ಹೈಮಾಸ್ಟ್ ದೀಪ ಸ್ಥಾಪಿಸುವುದಾಗಿ ತಿಳಿಸಿ, ಹಟ್ಟಿ ಮಾರಮ್ಮ ದೇಗುಲದ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡಲಾಗುವುದು ಮತ್ತು 4 ಎಕರೆ ಜಾಗವಿದ್ದು, ಶೀಘ್ರ ಜಿಪಿಎಸ್ ಮನೆಗಳನ್ನು ನಿರ್ಮಿಸಿ ಬಡವರಿಗೆ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಮಂಡರ ಕಾಲೋನಿಯ ಜನರು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು. 2013ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಂತರ ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ 80 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇದರಿಂದ ಅಲ್ಲಿನ ಜನರು ವ್ಯಾಪಾರ ದ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ಜೀವನ ನಡೆಸುತ್ತಿದ್ದು ಸಂತಸ ತಂದಿದೆ. ಈಗ ಅಲ್ಲಿನ ಮಕ್ಕಳು ಉತ್ತಮವಾದ ವಿದ್ಯಾಬ್ಯಾಸ ಮಾಡಿ ಕೆಲಸ - ಕಾರ್ಯಗಳಿಗೆ ತೆರಳುತ್ತಿದ್ದು . ಈ ರೀತಿಯ ಬದಲಾವಣೆಗಳು ಆದಾಗ ಮಾತ್ರ ನವ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, 23ನೇ ವಾರ್ಡಿನ ಮತದಾರರು ಮತ ನೀಡಿ ಗೆಲ್ಲಿಸಿದ್ದರ ಪರಿಣಾಮ ತಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿತು. ಅಲ್ಲದೆ ಕೆ.ಎನ್. ರಾಜಣ್ಣ ಅವರು ನನ್ನನ್ನು ಪುರಸಭೆ ಅಧ್ಯಕ್ಷನನ್ನಾಗಿ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದರು. ಅವರಿಗೆ ನಾನು ಎಂದೆಂದಿಗೂ ಚಿರಋಣಿ. ಈ ವಾರ್ಡಿನಲ್ಲಿ ಸುಮಾರು 10 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. 25 ಕೋಟಿಗೂ ಅಧಿಕ ಹಣ ತಂದು ಮಧುಗಿರಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಶಾಸಕ ಕೆ.ಎನ್.ರಾಜಣ್ಣ ಮತ್ತು
ಮುಖಂಡ ಎಂ.ವಿ.ಮೂಡ್ಲಗಿರೀಶ್ ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ , ಕೆ.ಪ್ರಕಾಶ್ , ಎನ್.ಗಂಗಣ್ಣ , ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಪುರಸಭೆ ಮಾಜಿ ಸದಸ್ಯ ಎಂ.ವಿ. ಮಂಜುನಾಥ್ ಆಚಾರ್, ಸಾಧಿಕ್, ವೈನ್ಸ ಹಾಲಪ್ಪ, ಅಯೂಬ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.