ಕನ್ನಡಪ್ರಭ ವಾರ್ತೆ ಬಳ್ಳಾರಿ
"ನೋಟ್‌ಬುಕ್ " ಮಕ್ಕಳ ಕಥಾ ಸಂಕಲನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ದೊರೆತ ಹಿನ್ನೆಲೆ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಾಹಿತ್ಯದ ಪರಿಭಾಷೆ ಬದಲಾಗಿದೆ. ಈ ಹಿಂದೆ ಮಕ್ಕಳ ಸಾಹಿತ್ಯ ಮಕ್ಕಳಿಗಾಗಿ ಮಾತ್ರ ಬರೆಯುವ ಸಾಹಿತ್ಯ ಎಂದೇ ತಿಳಿಯಲಾಗಿತ್ತು. ಆದರೆ, ಇತ್ತೀಚೆಗೆ ಬರುತ್ತಿರುವ ಬಾಲ್ಯ ಸಾಹಿತ್ಯವನ್ನು ಎಲ್ಲ ವಯೋಮಾನದವರೂ ಓದುತ್ತಿದ್ದಾರೆ. ನಾನು ಬರೆದಿರುವ ಹಾಗೂ ಬರೆಯುತ್ತಿರುವ ಸಾಹಿತ್ಯ ಮಕ್ಕಳನ್ನು ಗುರಿಯಾಗಿಸಿಕೊಂಡು ರಚನೆ ಮಾಡಿಲ್ಲ. ಪ್ರತಿಯೊಬ್ಬರಲ್ಲೂ ಮಗುತನ ಇರುತ್ತದೆ. ಮಗುತನ ಇರುವವರಿಗಾಗಿ ಸಾಹಿತ್ಯ ರಚನೆ ಮಾಡುತ್ತಿದ್ದೇನೆ. ನನ್ನೊಳಗಿನ ಬಾಲ್ಯತ್ವಕ್ಕೆ ಕಥಾ ರೂಪ ನೀಡುತ್ತಿದ್ದೇನೆ. ಹೀಗಾಗಿ ನನ್ನ ಕಥೆಗಳು ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತವೆ ಎಂದು ಹೇಳಿದರು.ಬಾಲ ಸಾಹಿತ್ಯ ಅಥವಾ ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯ ಲೇಖಕರು ಬರುತ್ತಿದ್ದು ಓದುಗರ ಸಂಖ್ಯೆಯೂ ದೊಡ್ಡದಾಗುತ್ತಿದೆ. ಬೇರೆ ಬೇರೆಯ ಸಾಹಿತ್ಯ ಪ್ರಕಾರಗಳಂತೆಯೇ ಮಕ್ಕಳ ಸಾಹಿತ್ಯವೂ ಮುನ್ನಲೆಗೆ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಶಿವಲಿಂಗಪ್ಪ ಹಂದಿಹಾಳು ಉತ್ತರಿಸಿದರು.
ತೊಂಬತ್ತರ ದಶಕದ ಈಚೆಗೆ ಮಕ್ಕಳ ಸಾಹಿತ್ಯ ವಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಲೇಖಕರು ಬಂದಿದ್ದು ಒಬ್ಬೊಬ್ಬರು 200ರಿಂದ 300 ಪುಸ್ತಕಗಳನ್ನು ಬರೆದವರು ಇದ್ದಾರೆ. ಆದರೆ, ಮಕ್ಕಳ ಸಾಹಿತ್ಯ ಬರವಣೆಗೆಯಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರೂ ಈ ಪೈಕಿ ಬಹುತೇಕ ಲೇಖಕರು ಹೆಚ್ಚು ಪ್ರಚುರಗೊಂಡಿಲ್ಲ. ಸಾಹಿತ್ಯ ಬೆರವಣಿಗೆಯ ಆಳಕ್ಕಿಳಿಯದಿರುವುದು ಅಥವಾ ಅವರು ಶಾಲೆಗೆ ಸೀಮಿತಗೊಳಿಸಿಕೊಂಡು ಸಾಹಿತ್ಯ ರಚನೆ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ನನಗೆ ಬಂದಿಲ್ಲ; ನೋಟ್‌ಬುಕ್‌ಗೆ ಬಂದಿದೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಶಿವಲಿಂಗಪ್ಪ ಹಂದಿಹಾಳುಗೆ ಬಂದಿಲ್ಲ. ನೋಟ್‌ಬುಕ್ ಕೃತಿಗೆ ಬಂದಿದೆ. ನನಗೆ ಪ್ರಶಸ್ತಿ ಬಂದಿದೆ ಎಂದುಕೊಂಡರೆ ತಪ್ಪಾದೀತು. ಪ್ರಶಸ್ತಿ, ಪುರಸ್ಕಾರಗಳೆಲ್ಲವೂ ನೋಟ್‌ಬುಕ್ ಕೃತಿಗೆ ಸಲ್ಲುತ್ತದೆ ಎಂದು ಹಂದಿಹಾಳು ತಿಳಿಸಿದರು.