ಕನ್ನಡಪ್ರಭ ವಾರ್ತೆ ಕೋಲಾರ
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ನಾನೇ, ಸತತವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸದನದ ಹೊರಗೂ, ಒಳಗೂ ನಿರಂತರ ಹೋರಾಟ ಮಾಡಿದ್ದೇನೆ, ಅನೇಕ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಿರುವುದರಿಂದ ಕ್ಷೇತ್ರದ ಗುರುವೃಂದ ನನ್ನೊಂದಿಗೆ ಇದ್ದು, ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ಎಂಎಲ್‌ಸಿ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಗೂ ಮುನ್ನವೇ ವಿವಿಧ ಶಿಕ್ಷಕ ಸಂಘಟನೆಗಳೊಂದಿಗೆ ಬಿರುಸಿನ ಪ್ರಚಾರ ಆರಂಭಿಸಿರುವ ಅವರು, ನಗರ ಹಾಗೂ ತಾಲೂಕಿನ ವಿವಿಧ ಪ್ರೌಢಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ವೇತನ ಆಯೋಗ ವಿಳಂಬ-ಅಸಮಾಧಾನರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಡಿಸೆಂಬರ್ ಒಳಗೆ ೭ನೇ ವೇತನ ಆಯೋಗ, ಒಪಿಎಸ್ ಜಾರಿ ಮಾಡುವ ಭರವಸೆ ಈಡೇರಿಸುವುದಾಗಿ ತಿಳಿಸಿ ಇದೀಗ ವಿಫಲವಾಗಿದೆ, ಜತೆಗೆ ಒಪಿಎಸ್ ಜಾರಿಯ ತನ್ನ ಪ್ರಣಾಳಿಕೆಯಿಂದಲೂ ಹಿಂದೆ ಸರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರ ಶಿಕ್ಷಕರು ಮತ್ತು ನೌಕರರಿಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ದು-ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ಇದನ್ನು ಕಾರ್ಯಗತಗೊಳಿಸಲು ಮುಂದಾಗಿಲ್ಲ ಎಂದು ಟೀಕಿಸಿದರು.ಎನ್‌ಪಿಎಸ್ ಅಡಿ ಈಗಾಗಲೇ ನಿವೃತ್ತರಾಗಿರುವ ಕೆಲವು ಶಿಕ್ಷಕರ ಬದುಕು ನರಕವಾಗಿದೆ, ಅವರ ಮುಸ್ಸಂಜೆಯ ಜೀವನದಲ್ಲಿ ತಿಂಗಳಿಗೆ ಕನಿಷ್ಠ ೨-೩ ಸಾವಿರವೂ ಕೈಗೆ ಬರುತ್ತಿಲ್ಲ, ಇಂತಹ ನೌಕರರ ನೆರವಿಗೆ ಸರ್ಕಾರ ಬರಬೇಕು, ಒಪಿಎಸ್ ಜಾರಿ ಮಾಡಬೇಕು ಎಂದರು.
ಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳ ನಡುವೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಸಹಶಿಕ್ಷಕರಿಂದ ಮುಖ್ಯಶಿಕ್ಷಕರಾಗಿ ಬಡ್ತಿ, ಸಹಶಿಕ್ಷಕರಿಂದ ಉಪನ್ಯಾಸಕರಾಗಿ ಬಡ್ತಿ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಅನುದಾನಿತ ಶಾಲೆ ಹುದ್ದೆ ಭರ್ತಿ ಮಾಡಿ
ಅನುದಾನಿತ ಶಾಲೆಗಳಲ್ಲಿ ೨೦೧೫ ರಿಂದೀಚೆಗೆ ಹುದ್ದೆಗಳ ಭರ್ತಿಗೆ ಅವಕಾಶ ನೀಡಬೇಕು, ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಬೇಕು ಎಂದು ಆಗ್ರಹಿಸಿದರು.ಖಾಸಗಿ ಶಾಲೆಗಳ ಶಿಕ್ಷಕರು ಕಡಿಮೆ ಸಂಬಳದೊಂದಿಗೆ ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದು, ಈ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಆಗ್ರಹಿಸಿದ ಅವರು, ಸರ್ಕಾರಿ ನೌಕರರು, ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಒತ್ತಾಯಿಸಿದರು.
ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ೧೮ ವರ್ಷದಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸದನದ ಹೊರಗೆ, ಒಳಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಜಾತಿ, ಮತ ಎಣಿಸದೇ ಶಿಕ್ಷಕ ಸ್ನೇಹಿಯಾಗಿದ್ದೇನೆ, ಯಾವುದೇ ಸಣ್ಣ ತಪ್ಪು ಎಸಗಿಲ್ಲ, ಕಪ್ಪು ಚುಕ್ಕೆ ಇಲ್ಲದಂತೆ ನಿಮ್ಮ ಪ್ರತಿನಿಧಿಯಾಗಿ ಗೌರವ ಉಳಿಸಿಕೊಂಡಿದ್ದೇನೆ ಎಂದರು.ಸರ್ಕಾರಿ ಬಾಲಕರ, ಬಾಲಕಿಯರ, ನೂತನ ಪದವಿ ಪೂರ್ವ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಬಾಲಕರ ಕಾಲೇಜು, ಸೆಂಟ್‌ಆನ್ಸ್, ನರಸಾಪುರ ಕೆಪಿಎಸ್ ಶಾಲೆ ಸೇರಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಸಹ್ಯಾದ್ರಿ ಆಡಳಿತಾಧಿಕಾರಿ ಉದಯಕುಮಾರ್, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ವಕೀಲ ಮಾಗೇರಿ ನಾರಾಯಣಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ನರಸಿಂಹಯ್ಯ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ಮುರಳಿಮೋಹನ್, ಮುಖಂಡ ಸೋಮಶೇಖರ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಮಂಜುನಾಥ,ಸುಭಾಷ್‌ಶಾಲೆಯ ಚೇತನ್, ವೇಣುಗೋಪಾಲ್, ಕೃಷ್ಣೇಗೌಡ, ರಮೇಶ್, ವಿಜಯಾನಂದ್, ಎಂ.ನಾಗರಾಜ್, ರಾಮಾಂಜಿ, ಶಿವಕುಮಾರ್ ಕವಿತಾ, ನಾರಾಯಣರೆಡ್ಡಿ, ಶಿವಾನಂದ್, ಐಟಿಐ ಶಿವಕುಮಾರ್, ನರಸಿಂಹರೆಡ್ಡಿ, ರವಿರೆಡ್ಡಿ, ಡಿಗ್ರಿ ಕಾಲೇಜಿನ ಶ್ರೀನಿವಾಸರೆಡ್ಡಿ ರತ್ನಪೊಪ ಇದ್ದರು.