ಕುಶಾಲನಗರ: ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ವಿಶ್ರಾಂತಿ ಮತ್ತು ಮೇವಿಗೆ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಬರುವ 2000 ಮಂದಿ ಸೇರಿದಂತೆ ಕೋಣಗಳನ್ನು ವೀಕ್ಷಿಸಲು ಆಗಮಿಸುವ ಕುಶಾಲನಗರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಡಿಕೇರಿ ಮೂಲಕ ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆಂದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ವಿಶ್ವ ತುಳುವೆರ ಕೂಟದ ಅಧ್ಯಕ್ಷ ಐತಪ್ಪ ರೈ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ವಿಶ್ರಾಂತಿ ವ್ಯವಸ್ಥೆ, ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಶಾಸಕ ಡಾ.ಮಂತರ್ ಗೌಡ ಮತ್ತು ಸ್ಥಳೀಯ ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮಾಜಿ ಸದಸ್ಯರಾದ ಡಿ ಕೆ ತಿಮಪ್ಪ, ಜಗದೀಶ್, ಸುರಯ್ಯಭಾನು, ತುಳುವರೆ ಕೂಟದ ಪ್ರಕಾಶ್ ಆಚಾರ್ಯ, ಅಪ್ರು ರವೀಂದ್ರ, ಮೊಗೇರ ಸಂಘದ ದಾಮೋದರ್, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಆರೋಗ್ಯ ನಿರೀಕ್ಷಕ ಉದಯಕುಮಾರ್ ಮತ್ತಿತರರು ಇದ್ದರು.