ದಸರಾ ದೀಪಾಲಂಕಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

KannadaprabhaNewsNetwork |  
Published : Oct 04, 2024, 01:06 AM IST
102 | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದಿಂದ ದಸರಾ ದೀಪಾಲಂಕಾರ

ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಚಾಲನೆ ನೀಡಿದರು. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿನ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು. ಪವರ್ ಮ್ಯಾನ್ ಗಳ ಕರ್ತವ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ರೂಪಿಸಲಾಗಿರುವ ವಿದ್ಯುತ್ ರಥಕ್ಕೂ ಚಾಲನೆ ನೀಡಲಾಯಿತು.ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಹಿಂದಿನ ವರ್ಷಗಳಿಗಿಂತ ಈ ಬಾರಿಯ ದೀಪಾಲಂಕಾರ ಇನ್ನಷ್ಟು ಆಕರ್ಷಕವಾಗಿದೆ ಎಂದರು. 130 ಕಿಮೀ ರಸ್ತೆಗೆ ದೀಪಾಲಂಕಾರಈ ಬಾರಿ ಮೈಸೂರು ನಗರದ 130 ಕಿ.ಮೀ ವ್ಯಾಪ್ತಿಯ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಬಿ.ಎನ್. ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆ.ಎಲ್.ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ಜತೆಗೆ ನಗರ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ನಗರದ ದೊಡ್ಡಕೆರೆ ಮೈದಾನ, ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ (ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್ ಹೌಸ್, ಎಲ್ಐಸಿ ವೃತ್ತ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳಿಂದಲೇ 65ಕ್ಕೂ ಹೆಚ್ಚು ಕಲಾಕೃತಿಗಳನ್ನು ನಿರ್ಮಿಸಲಾಗಿದೆ. 21 ದಿನಗಳ ಆಕರ್ಷಣೆದಸರಾ ಹಿನ್ನೆಲೆಯಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರ ಈ ಬಾರಿ ಒಟ್ಟು 21 ದಿನಗಳ ಕಾಲ ನಡೆಯಲಿದೆ. ದಸರಾ ದೀಪಾಲಂಕಾರಕ್ಕೆ 6.50 ಕೋಟಿ ರೂ. ವೆಚ್ಚವಾಗುತ್ತಿದ್ದು, 2881 ಕಿ.ವ್ಯಾ ಅಂದಾಜು ತಾತ್ಕಾಲಿಕ ವಿದ್ಯುತ್ ಸಂಪರ್ಕ ಭಾರ ಹಾಗೂ 242012 ಯೂನಿಟ್ ಗಳ ವಿದ್ಯುತ್ ಬಳಕೆ ಮಾಡಲಾಗುತ್ತಿದೆ. ಡ್ರೋನ್ ಶೋ ಮೆರಗುದಸರಾ ದೀಪಾಲಂಕಾರದೊಂದಿಗೆ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್.ಇ.ಡಿ. ಬಲ್ಪ್ ಗಳನ್ನು ಅಳವಡಿಸಿರುವ ಸುಮಾರು 1500 ಡೋನ್ ಬಳಸಿ ಆಕಾಶದಲ್ಲಿ ಅದ್ಭುತ ವಿನ್ಯಾಸ ಮೂಡಿಸಲಾಗುವುದು. ಅ. 6 ಮತ್ತು 7ರಂದು ಹಾಗೂ 11, 12 ರಂದು ರಾತ್ರಿ 8 ಗಂಟೆಯಿಂದ 8.15 ರವರೆಗೆ ಡ್ರೋನ್ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ. 6 ಮತ್ತು 7 ರಂದು ಡ್ರೋನ್ ಶೋ ವೀಕ್ಷಿಸಲು ಉಚಿತ ಪ್ರವೇಶವಿರುತ್ತದೆ. ವಿದ್ಯುತ್ ರಥ ಸಂಚಾರದಸರಾ ಸಂದರ್ಭದಲ್ಲಿ ಪವರ್ ಮ್ಯಾನ್ "ಗಳ ಕರ್ತವ್ಯ, ಗೃಹಜ್ಯೋತಿ, ಕೃಷಿ ಬಳಕೆಗೆ ಸೌರ ವಿದ್ಯುತ್, ವಿದ್ಯುತ್ ಸುರಕ್ಷತೆ ಹಾಗೂ ನುಡಿದಂತೆ ನಡೆದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಂಡ ವಿದ್ಯುತ್ ರಥವನ್ನು ರೂಪಿಸಲಾಗಿದೆ. ಈ ರಥ ದಸರಾ ಉತ್ಸವದ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದೆ ಎಂದರು. ಸುರಕ್ಷತೆಗೆ ಆದ್ಯತೆಈ ಬಾರಿಯ ವಿದ್ಯುತ್ ದೀಪಾಲಂಕಾರದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿದ್ದು, ವಿದ್ಯುತ್ ಅವಘಡ ಸಂಭವಿಸಿದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಎಂಎಲ್ಸಿಗಳಾದ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಎಂಡಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜು ಮೊದಲಾದವರು ಇದ್ದರು.---ಕೋಟ್ಇತ್ತೀಚಿನ ದಿನಗಳಲ್ಲಿ ಸೆಸ್ಕ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗಮದ ಎಲ್ಲ ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಗೃಹಜ್ಯೋತಿ ಸೇರಿದಂತೆ ಎಲ್ಲ ಭಾಗ್ಯಗಳು ಇದೇ ರೀತಿ ಮುಂದುವರಿಯಲಿದೆ.ಈ ಬಾರಿ ಆಕರ್ಷಕವಾಗಿ ದೀಪಾಲಂಕಾರ ಮಾಡಲಾಗಿದ. - ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ