- ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಕಳವಳ
- ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ--
ಕನ್ನಡಪ್ರಭ ವಾರ್ತೆ ಮೈಸೂರುಆಡಳಿತದಲ್ಲಿ ಕನ್ನಡ ಅನುಷ್ಠಾನವಾಗಬೇಕು ಹಾಗೂ ಗಣಕಯಂತ್ರದಲ್ಲಿ ಕನ್ನಡದ ಸಂಪೂರ್ಣ ಬಳಕೆಯಾಗದಿದ್ದರೆ ಕನ್ನಡವು ಸಂಸ್ಕೃತದಂತೆ ಮೃತಭಾಷೆ ಆಗಲಿದೆ ಎಂದು ವಿಶ್ರಾಂತ ಕುಲಪತಿ ಮತ್ತು ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಕೆ. ಚಿದಾನಂದಗೌಡ ಕಳವಳ ವ್ಯಕ್ತಪಡಿಸಿದರು.
ಕನ್ನಡವು ಸಂಸ್ಕೃತದಂತೆ ಮೃತ ಭಾಷೆಯಾಗದಂತೆ ತಪ್ಪಿಸುವುದು ನಮ ಮುಂದಿನ ಸವಾಲು.ಗಣಕದಲ್ಲಿ ಕನ್ನಡ ಬಳಕೆ ಕಡಿಮೆಯಾದರೆ ಕ್ರಮೇಣ ಅದು ಆಡಳಿತ ಭಾಷೆಯ ಸ್ಥಾನವನ್ನೂ ಕಳೆದುಕೊಂಡು, ಕೇವಲ ಹಾಡು ಭಾಷೆಯಾಗಿ, ಮಂಕಾಗಿ ಮೃತ ಭಾಷೆಯಾಗುತ್ತದೆ ಎಂದರು.
ಜಾಗತೀಕರಣದ ಈ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿ ಉಳಿವಿನ ಸವಾಲನ್ನು ಎದುರಿಸಬೇಕಿದೆ. ಇದಕ್ಕಾಗಿ ನಾವು ಹೋರಾಟ ನಡೆಸಬೇಕು. ಅಜ್ಞಾನದ ಮಾನಸಿಕ ಸ್ಥಿತಿಯೆದುರು, ಗಣಕದೊಡನೆ ಸಾಧ್ಯವಿರುವಲ್ಲೆಲ್ಲ ಕನ್ನಡವನ್ನು ಬಳಸುವ ಛಲ ಹೊತ್ತು ಸುಜ್ಞಾನದ ಬುದ್ಧಿಪೂರ್ವಕವಾದ ಹೋರಾಟ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಬಾಹ್ಯಲೋಕದಲ್ಲಿ ಚಂದಿರನ ಅಂಗಳಕ್ಕೆ ಹೋಗಿ ಬಂದಿದ್ದೇವೆ. ಆದರೆ ಅಂತರಂಗದ ಮಂದಿರದಲ್ಲಿ ಅಮಾವಾಸ್ಯೆಯ ಕತ್ತಲಿದೆ. ವಿವೇಕ ಕಡಿಮೆಯಾಗಿ ವಿಶ್ವಜ್ಞಾನ ಹೆಚ್ಚುತ್ತಿದೆ. ಕಂಪ್ಯೂಟರಿನ ಕಾಮನ ಬಿಲ್ಲಿಗೆ ಕಣ್ಣು ತೆರೆದಿದ್ದೇವೆ. ಆದರೆ, ಕನ್ನಡದ ಕಂಪಿಗೆ ಮೂಗು ಮುಚ್ಚಿದ್ದೇವೆ ಎಂದು ಅವರು ಕುಟುಕಿದರು.
ನಾವು ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಘನತೆ ಮತ್ತು ಶ್ರೇಷ್ಠತೆಯನ್ನು ಹೇಳಿಕೊಡದೆ ವಸಾಹತುಶಾಹಿ ಕಾರಣದ ಇಂಗ್ಲಿಷ್ಹೇಳಿಕೊಡುತ್ತಿದ್ದೇವೆ. ಇಂಗ್ಲೆಂಡಿನಿಂದ ಕೇವಲ 35 ಕಿ.ಮೀ ಇರುವ ಫ್ರಾನ್ಸ್ ನಲ್ಲಿ ಇಂಗ್ಲಿಷ್ ಭಾಷೆಗೆ ಪ್ರವೇಶವಿಲ್ಲ. ಜರ್ಮನಿಗರ ಪಾಲಿಗೆ ಇಂಗ್ಲಿಷ್ ಬಳಕೆಯೇ ಅವಮಾನ. ತರ್ಕ ಮತ್ತು ರಾಚನೀಕ ದೃಷ್ಟಿಯಿಂದಲೂ ಮುಖ್ಯವಲ್ಲದ ಇಂಗ್ಲಿಷ್ ಭಾಷೆಯನ್ನು ದೊಡ್ಡ ಭಾಷೆಯಾಗಿ ಕಟ್ಟಿದರು. ಅದು ಇಂಗ್ಲಿಷರ ತಾಕತ್ತು ಎಂದರು.
ಈಗ ಕನ್ನಡ ಸಂರಕ್ಷಿಸುವುದು ಹುಲಿ ಸಂರಕ್ಷಣೆಯಂತೆ ಆಗಬೇಕು. ಕನ್ನಡ ಮೇಷ್ಟ್ರು, ಸಾಹಿತ್ಯ ಬರೆಯುವವರಿಗೆ ಸೇರಿದ್ದು, ಉಳಿದವರಿಗೆ ಸಂಬಂಧಿಸಿದ್ದಲ್ಲ ಎಂಬ ಕನ್ನಡದ ಬಗೆಗಿನ ತಪ್ಪು ಕಲ್ಪನೆಗಳು ನಿವಾರಣೆಯಾಗಬೇಕು ಎಂದರು.