ಕನ್ನಡಪ್ರಭ ವಾರ್ತೆ ದಾವಣಗೆರೆ
ಮೈಸೂರಿನಲ್ಲಿ ಆ.9ರಂದು ನಡೆಯುವ ಜನಾಂದೋಲನ ಸಮಾರೋಪದಲ್ಲಿ ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವುದಾಗಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶುಭಮಂಗಳ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಮೈಸೂರಿನಲ್ಲಿ ಹಮ್ಮಿಕೊಂಡ ಜನಾಂದೋಲನ ಸಮಾರೋಪದಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಹಾಗೂ ಶುಕ್ರವಾರ ಬೆಳಗಿನ ಜಾವವೇ ನಮ್ಮ ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ಜನ ತೆರಳುತ್ತಿದ್ದೇವೆ ಎಂದರು. ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ. ಈ ಹಿನ್ನೆಲೆ ಸಿಎಂರಿಗೆ ನೈತಿಕ ಬೆಂಬಲ ಸೂಚಿಸುವ ಜೊತಗೆ ಮೈಸೂರು ಜನಾಂದೋಲನ ಸಮಾರೋಪಕಕ್ಕೆ ಶಕ್ತಿ ತುಂಬಲಿದ್ದೇವೆ ಎಂದು ಹೇಳಿದರು.
ನಾಲ್ಕು ದಶಕದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಚ್ಛ ಮತ್ತು ಪಾರದರ್ಶಕ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಎರಡನೇ ಅವದಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಒಂದೇ ಒಂದು ಭ್ರಷ್ಟಾಚಾರ, ಹಗರಣ ಸಹ ಮಾಡಿಲ್ಲ. ಯಾವುದೇ ಕಪ್ಪು ಚುಕ್ಕೆ ಸಹ ಇಲ್ಲದಂತೆ ಸ್ವಚ್ಛ ರಾಜಕಾರಣ ಮಾಡಿದಂತಹ ರಾಜಕಾರಣಿ ಎಂದು ತಿಳಿಸಿದರು. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಸೇರಿ ಸಮಾಜದ ಕಟ್ಟ ಕಡೆ ವ್ಯಕ್ತಿಗಳನ್ನೂ ಗುರುತಿಸಿ, ಅನೇಕ ಸೌಲಭ್ಯ, ಸ್ಥಾನಮಾನ, ಅವಕಾಶ ನೀಡುತ್ತಾ ಬಂದವರು ಸಿದ್ದರಾಮಯ್ಯ. ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯ ವಿರುದ್ಧ ರಾಜಕೀಯ ದ್ವೇಷದಿಂದ, ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ-ಜೆಡಿಎಸ್ ಷಡ್ಯಂತ್ರ ನಡೆಸಿದ್ದು, ಅದರ ಭಾಗವಾಗಿ ಪಾದಯಾತ್ರೆ ಕೈಗೊಂಡಿವೆ ಎಂದು ಆರೋಪಿಸಿದರು.ಮುಡಾ, ವಾಲ್ಮೀಕಿ ನಿಗಮ ಸೇರಿ ಯಾವುದರಲ್ಲೂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಹಾಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಪ್ರಶ್ನೆಯೇ ಇಲ್ಲ. ಒಮ್ಮೆ ಸಿದ್ದರಾಮಯ್ಯವರನ್ನು ಅಧಿಕಾರದಿಂದ ಕೆಳಗಿಳಿಸವು, ಷಡ್ಯಂತ್ರ, ಹುನ್ನಾರ, ಕುತಂತ್ರಗಳನ್ನು ಮಾಡಿ, ಸಿಎಂ ಸ್ಥಾನಕ್ಕೆ ಚ್ಯುತಿ ತರುವ ಕೆಲಸವನ್ನು ಯಾರೇ ಮಾಡಿದರೆ ಅಂತಹವರ ವಿರುದ್ಧ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಹಿಂದೆ ಬಿಜೆಪಿ ಆಳ್ವಿಕೆಯಲ್ಲಿ ಆದ ಭ್ರಷ್ಟಾಚಾರ, ಹಗರಣಗಳ ದೊಡ್ಡ ದೊಡ್ಡ ಸರಮಾಲೆಯೇ ಇದೆ. ಹೀಗೆ ಭ್ರಷ್ಟಾಚಾರ ಮಾಡಿ, ಹಗರಣಗಳ ಸುಳ್ಳು ಆರೋಪವನ್ನು ಸಿದ್ದರಾಮಯ್ಯನವರ ಮೇಲೆ ಮಾಡುತ್ತಾ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದು ನಾಚಿಕೆಗೇಡಿನ ಸಂಗತಿ. ಅಧಿಕಾರ ಇದ್ದಾಗಲೆಲ್ಲಾ ಭ್ರಷ್ಟಾಚಾರ ಮಾಡಿದ ಬಿಜೆಪಿ-ಜೆಡಿಎಸ್‌ನವರ ಇಂತಹ ಪಾದಯಾತ್ರೆ ಕುತಂತ್ರದ ಬಗ್ಗೆ ಜನರಿಗೂ ಅರಿವಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವ ನೆರವಿಗೆ ಹೋಗದ ಬಿಜೆಪಿ-ಜಿಡಎಸ್ ನಾಯಕರು ಇಲ್ಲಸಲ್ಲದ ವಿಷಯ ಮುಂದಿಟ್ಟುಕೊಂಡು ಪಾದಯಾತ್ರೆ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿಯಗಿದೆ ಎಂದುಅವರು ದೂರಿದರು.
ಪಕ್ಷದ ಮುಖಂಡರಾದ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ, ಸದಸ್ಯರಾದ ಸವಿತಾ ಹುಲ್ಮನಿ ಗಣೇಶ, ಆಶಾ ಉಮೇಶ, ಸುಧಾ ಇಟ್ಟಿಗುಡಿ ಮಂಜುನಾತ, ಕೆ. ಕಾವ್ಯಾ, ಮಂಜುಳಮ್ಮ, ಮಂಗಳಮ್ಮ ಇತರರು ಇದ್ದರು.