ಕನ್ನಡಪ್ರಭ ವಾರ್ತೆ ಮಂಡ್ಯ
ಕಾರ್ಖಾನೆಗೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಲಿಚ್ಚಿಸುವವರು ಜೂ.೧೨ರೊಳಗೆ ಅಧ್ಯಕ್ಷರ ಕಚೇರಿಗೆ ಪ್ರಶ್ನಾವಳಿಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಜೂ.೧೮ರೊಳಗೆ ಉತ್ತರಗಳನ್ನು ಸಿದ್ಧಪಡಿಸಿ ಮುಕ್ತ ಚರ್ಚೆಗೆ ಆಹ್ವಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ-ಮಿಲ್ ಹಾಗೂ ಅನುಪಯುಕ್ತ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ಏಜೆನ್ಸಿಯಿಂದ ಮೌಲ್ಯವರ್ಧನೆ ಮಾಡಿಸದೆ ಮಾರಾಟ ಮಾಡಲಾಗಿದೆ. ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚೆಯಾಗದೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೇ ಸಭೆ ನಡಾವಳಿಯಲ್ಲಿ ಸಹಿ ಹಾಕಿಕೊಂಡು ಮಾರಾಟ ಮಾಡಿದ್ದಾರೆ. ಸುಮಾರು ೧೨ ಕೋಟಿ ರು. ಮೌಲ್ಯದ ಅನುಪಯುಕ್ತ ವಸ್ತುಗಳನ್ನು ಕೇವಲ ೪.೩೦ ಕೋಟಿ ರು.ಗೆ ಮಾರಾಟ ಮಾಡಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದರು.ಕಾರ್ಖಾನೆ ಆರ್ಥಿಕವಾಗಿ ನಷ್ಟದಲ್ಲಿದ್ದರೂ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರ ನಿರ್ದೇಶಕರ ಉಪಯೋಗಕ್ಕೆ ಅವಶ್ಯವಿರುವ ಒಂದು ಹೊಸ ಇನ್ನೋವಾ ಕಾರನ್ನು ಖರೀದಿಸಲು ತೀರ್ಮಾನಿಸಿರುವ ಉದ್ದೇಶವೇನು. ಬಿ-ಮಿಲ್‌ನ್ನು ಗುಜರಿ ಲೆಕ್ಕದಲ್ಲಿ ಮಾರಾಟ ಮಾಡಲು ಅನುಸರಿಸಿದ ಕಾನೂನು ಪ್ರಕ್ರಿಯೆಗಳೇನು. ಅನುಪಯುಕ್ತ ವಸ್ತುಗಳ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳು, ಕಳೆದ ಮೂರು ವರ್ಷಗಳಲ್ಲಿ ಕಾರ್ಖಾನೆಯ ಯಾವೆಲ್ಲಾ ಚರ-ಸ್ಥಿರ ಆಸ್ತಿಗಳನ್ನು ವಿಲೇವಾರಿ ಮಾಡಲಾಗಿದೆ. ಅದರ ಮಾರುಕಟ್ಟೆ ಮೌಲ್ಯ ಎಷ್ಟು, ಎಷ್ಟು ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬೆಲ್ಲಾ ಪ್ರಶ್ನೆಗಳನ್ನು ಅಧ್ಯಕ್ಷರ ಮುಂದಿಟ್ಟಿದ್ದಾರೆ.
ಕಾರ್ಖಾನೆ ವಿರುದ್ಧ ಎದುರಾಗುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆಲ್ಲಾ ಇತಿಶ್ರೀ ಹಾಡಲು ನಿರ್ಧರಿಸಿರುವ ಅಧ್ಯಕ್ಷ ಸಿ.ಡಿ.ಗಂಗಾಧರ್ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಮುಕ್ತ ಚರ್ಚೆಗೆ ಆಹ್ವಾನಿಸಿ ಉತ್ತರಿಸಿದ ಬಳಿಕ ಮತ್ತೆ ಇದೇ ಆರೋಪಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವಂತಿಲ್ಲ. ಭ್ರಷ್ಟಾಚಾರ ನಡೆಯದ ರೀತಿಯಲ್ಲಿ ಬಿ-ಮಿಲ್ ಹಾಗೂ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿದ್ದೇವೆ. ಎಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿಲ್ಲ. ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಘಟನೆಗಳ ಮುಖಂಡರ ಮುಂದಿಡಲು ಸಿದ್ಧರಿರುವುದಾಗಿ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.