ಕನ್ನಡಪ್ರಭ ವಾರ್ತೆ ಮಂಡ್ಯ
ಚಿಕ್ಕಮಂಡ್ಯ ಗ್ರಾಮದಲ್ಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಸಮಿತಿಯ ಮುಖಂಡರು. ಮೈಷುಗರ್ ಅವ್ಯವಹಾರಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಹತ್ತಾರು ಬಾರಿ ಒತ್ತಾಯಿಸಿದರೂ ಈವರೆಗೂ ಶ್ವೇತಪತ್ರ ಹೊರಡಿಸಿಲ್ಲ. ಬದಲಿಗೆ ಮೈಷುಗರ್ ಕಾರ್ಖಾನೆಯನ್ನು ಹಿಂಬಾಗಿಲಿನಿಂದ ಖಾಸಗೀಕರಣ ಮಾಡಲಾಗುತ್ತಿದೆ. ಕಾರ್ಖಾನೆಗೆ ಬಾಯ್ಲಿಂಗ್ ಘಟಕ. ಡಿಸ್ಟಿಲರಿ ಸ್ಥಾಪಿಸಿ ಉಪ ಉತ್ಪನ್ನಗಳ ಆಧಾರದಲ್ಲಿ ಟನ್ ಕಬ್ಬಿಗೆ ಐದು ಸಾವಿರ ಕೊಡಲು ಸಾಧ್ಯವಿದೆ ಎಂದು ಜನರಿಗೆ ತಿಳಿಸಿದರು.
ಆದರೆ, ಆದಕ್ಷ ಆಡಳಿತ ಹಾಗೂ ಭ್ರಷ್ಟಾಚಾರದಿಂದ ಸಕಾಲಕ್ಕೆ ಕಬ್ಬು ನುರಿಸುವಲ್ಲಿ ಕಾರ್ಖಾನೆ ಆಡಳಿತ ಮಂಡಳಿ ವಿಫಲವಾಗಿದೆ. ಇದರ ಪರಿಣಾಮ ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಅಗ್ಗದ ಬೆಲೆ ನೀಡಿ ಶೋಷಿಸುತ್ತಿವೆ. ಬೇಸತ್ತ ರೈತರು ತೆಂಗು ಅಡಿಕೆಯಂತಹ ಪರ್ಯಾಯ ಬೆಳೆಗಳಿಗೆ ಮೊರೆ ಹೋಗಿದ್ದಾರೆ ಎಂದರು.ಕಬ್ಬು ಸಾಗಾಣಿಕೆಯಲ್ಲೂ ಸ್ಥಳೀಯ ಲಾರಿ ಮಾಲೀಕರಿಗೂ ಅನ್ಯಾಯ ಎಸಗಲಾಗಿದೆ. ಇದು ಸಾಲದೆಂಬಂತೆ ಕಾರ್ಖಾನೆಯ ಭಾಗವೇ ಆಗಿರುವ ಲಾರಿಗಳನ್ನುನಿಲ್ದಾಣದಿಂದ ಎತ್ತಂಗಡಿ ಮಾಡುವ ಪ್ರಯತ್ನ ನಡೆದಿದೆ. ಹನಕೆರೆ ಹಾಗೂ ಎಸ್.ಐ. ಕೋಡಿಹಳ್ಳಿಯಲ್ಲಿನ ಸಮುದಾಯ ಭವನಗಳು ಹಾಗೂ ಮೈಷುಗರ್ ಭೂಮಿಯನ್ನು ನಿಯಮಬಾಹಿರವಾಗಿ ಖಾಸಗಿಯವರ ಪಾಲು ಮಾಡಲಾಗಿದೆ. ಕಾರ್ಖಾನೆಯೊಳಗೆ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಜನಪ್ರತಿನಿಧಿಗಳ ಮೌನ ಸಂಶಯಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಥಾ ಚಾಲನೆ ಸಂದರ್ಭದಲ್ಲಿ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ರಾಜೇಂದ್ರ, ಗುಡ್ಡದ ಕೊಪ್ಪಲು ಶಿವಣ್ಣ, ಕುಮಾರ್ ಕನ್ನಡಿಗ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಮೇಶ್ ಗೌಡ, ಮಲ್ಲೇಶ್, ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ವೇಣುಗೋಪಾಲ್, ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುತ್ತುರಾಜು, ಸುನಿಲ್, ಯೋಗೇಶ್ ಇತರರಿದ್ದರು.