ಮೈಷುಗರ್ ಅಕ್ರಮ ಸಾಬೀತು: ಎಂಡಿ ಪದಚ್ಯುತಿಗೆ ಎಂ.ಬಿ.ನಾಗಣ್ಣಗೌಡ ಆಗ್ರಹ

KannadaprabhaNewsNetwork |  
Published : Jul 17, 2026, 01:30 AM IST
೧೬ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೈಷುಗರ್ ಉಳಿಸಿ ಹೋರಾಟ ಸಮಿತಿಯ ಎಂ.ಬಿ.ನಾಗಣ್ಣಗೌಡ ಮಾತನಾಡಿದರು. | Kannada Prabha

ಸಾರಾಂಶ

ಮೈಷುಗರ್ ಆವರಣದಲ್ಲಿ ಸೀಸಿ ಟೀವಿ ಅಳವಡಿಕೆಯನ್ನು ಆರ್‌ಬಿ ಟೆಕ್ ಏಜೆನ್ಸಿಯೇ ಮಾಡಿಕೊಂಡಿದೆ ಎಂದು ಆರಂಭದಲ್ಲಿ ಅಧ್ಯಕ್ಷರು ರೈತರನ್ನು ದಿಕ್ಕು ತಪ್ಪಿಸಿದ್ದರು. ಆದರೆ, ತನಿಖಾ ವರದಿಯ ಪ್ರಕಾರ ಆರ್‌ಬಿ ಟೆಕ್ ಏಜೆನ್ಸಿ ಸಿಸಿ ಟೀವಿ ಬಾಬ್ತು ಹಣವನ್ನು ಐಟಿ ವರ್ಲ್ಡ್ ಕಂಪನಿಗೆ ಪಾವತಿಸುವಂತೆ ಕೋರಿದ್ದು, ಅದರಂತೆ ಸೀಸಿ ಟೀವಿ ಅಳವಡಿಕೆಗಾಗಿ ಐಟಿ ವರ್ಲ್ಡ್ ಕಂಪನಿಗೆ ಮೈಷುಗರ್‌ನಿಂದ ₹೧೦.೪೯ ಲಕ್ಷ ಗಳನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಆಡಳಿತ ಮಂಡಳಿ ವಿರುದ್ಧ ಮಾಡಲಾಗಿದ್ದ ಆರೋಪಗಳ ಕುರಿತು ನೇಮಿಸಿದ್ದ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ ಗಾಯಕ್‌ವಾಡ್ ನೇತೃತ್ವದ ತನಿಖಾ ಸಮಿತಿ ವರದಿ ನೀಡಿದ್ದು, ವರದಿಯಲ್ಲಿನ ಬಹುತೇಕ ಹಗರಣಗಳು ಸಾಬೀತಾಗಿವೆ ಎಂದು ಮೈಷುಗರ್ ಉಳಿಸಿ ಹೋರಾಟ ಸಮಿತಿಯ ಎಂ.ಬಿ.ನಾಗಣ್ಣಗೌಡ ಹೇಳಿದರು.

ತನಿಖಾ ಸಮಿತಿಯು ವಿಸ್ತೃತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ನಿಯಮಗಳ ಉಲ್ಲಂಘನೆ, ಸ್ವಜನಪಕ್ಷಪಾತ, ಹಣ ದುರ್ಬಳಕೆ ಆಗಿರುವ ಅಂಶಗಳನ್ನು ಬಹಿರಂಗಗೊಳಿಸಿದೆ. ಮುಖ್ಯವಾಗಿ ಕಾರ್ಖಾನೆಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಕೆಪಿಟಿಟಿ ನಿಯಮದಂತೆ ಇ-ಪೊಕ್ಯೂರ್‌ಮೆಂಟ್ ಮೂಲಕ ಏಜೆನ್ಸಿಗಳನ್ನು ಆಹ್ವಾನಿಸಿಲ್ಲ. ಬದಲಿಗೆ ನೇರ ಗುತ್ತಿಗೆ ನೀಡಲಾಗಿದೆ. ಸ್ವಿಸ್ ಎಂಬ ಹೊರಗುತ್ತಿಗೆ ಏಜೆನ್ಸಿಗೆ ಒಪ್ಪಿಕೊಂಡ ಶೇ.೧ರ ಸೇವಾಶುಲ್ಕದ ಬದಲು ಶೇ.೩ರಷ್ಟು ಸೇವಾಶುಲ್ಕ ಪಾವತಿಸಿ ಕಂಪನಿಗೆ ₹೩,೮೧,೫೫೭ ಗಳನ್ನು ನಷ್ಟ ಉಂಟುಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಕ್ಕರೆ ಮಾರಾಟದಲ್ಲೂ ಟೆಂಡರ್‌ದಾರರಿಂದ ಇಎಂಡಿ ಪಡೆಯದೆ ಅವಕಾಶ ನೀಡಿದ್ದರಿಂದ ಸಕಾಲಕ್ಕೆ ಸಕ್ಕರೆ ಎತ್ತುವಳಿ ಮಾಡದೆ ಕಂಪನಿಗೆ ₹೧೯,೮೯ ಲಕ್ಷ ನಷ್ಟ ಉಂಟುಮಾಡಲಾಗಿದೆ. ನಿಯಮಬಾಹಿರವಾಗಿ ನಿವೃತ್ತ ನೌಕರರ ನೇಮಕ, ಅನಗತ್ಯ ನೇಮಕಾತಿಗಳನ್ನು ಮಾಡಿಕೊಂಡಿರುವುದನ್ನು ವರದಿ ದೃಢೀಕರಿಸಿದೆ ಎಂದು ಹೇಳಿದರು.

ಮೈಷುಗರ್ ಆವರಣದಲ್ಲಿ ಸೀಸಿ ಟೀವಿ ಅಳವಡಿಕೆಯನ್ನು ಆರ್‌ಬಿ ಟೆಕ್ ಏಜೆನ್ಸಿಯೇ ಮಾಡಿಕೊಂಡಿದೆ ಎಂದು ಆರಂಭದಲ್ಲಿ ಅಧ್ಯಕ್ಷರು ರೈತರನ್ನು ದಿಕ್ಕು ತಪ್ಪಿಸಿದ್ದರು. ಆದರೆ, ತನಿಖಾ ವರದಿಯ ಪ್ರಕಾರ ಆರ್‌ಬಿ ಟೆಕ್ ಏಜೆನ್ಸಿ ಸಿಸಿ ಟೀವಿ ಬಾಬ್ತು ಹಣವನ್ನು ಐಟಿ ವರ್ಲ್ಡ್ ಕಂಪನಿಗೆ ಪಾವತಿಸುವಂತೆ ಕೋರಿದ್ದು, ಅದರಂತೆ ಸೀಸಿ ಟೀವಿ ಅಳವಡಿಕೆಗಾಗಿ ಐಟಿ ವರ್ಲ್ಡ್ ಕಂಪನಿಗೆ ಮೈಷುಗರ್‌ನಿಂದ ₹೧೦.೪೯ ಲಕ್ಷ ಗಳನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆರೋಪಿಸಿದರು.

ಮೊಲಾಸಸ್ ಟ್ಯಾಂಕ್‌ನ್ನು ಸೂಕ್ತ ನಿರ್ವಹಣೆ ಮಾಡದ ಕಾರಣ ೨೦ ಮೆಟ್ರಿಕ್ ಟನ್ ಮೊಲಾಸಸ್ ಸೋರಿಕೆಯಾಗಿ ಕಾರ್ಖಾನೆಗೆ ₹೨.೫ ಲಕ್ಷ ನಷ್ಟ ಉಂಟಾಗಿದೆ. ಕಾರ್ಖಾನೆಯ ಸ್ವಚ್ಛತೆಯನ್ನು ತಮಗೆ ಬೇಕಾದವರಿಗೆ ನೀಡುವ ಸಲುವಾಗಿ ಒಂದೇ ವರ್ಷದಲ್ಲಿ ಹಲವು ಉಪ ಗುತ್ತಿಗೆಗಳನ್ನು ನೀಡಲಾಗಿದೆ. ಇಲ್ಲಿ ಕೆಟಿಟಿಪಿ ನಿಯಮದಂತೆ ಟೆಂಡರ್ ತಪ್ಪಿಸುವ ಸಲುವಾಗಿ ಹಲವು ಗುತ್ತಿಗೆದಾರರಿಗೆ ಸ್ವಚ್ಛತೆಯ ಗುತ್ತಿಗೆ ನೀಡಿರುವುದನ್ನು ಸಮಿತಿ ಬೊಟ್ಟು ಮಾಡಿದೆ. ಆಂತರಿಕ ಸ್ವಚ್ಛತೆ ಕಾರ್ಖಾನೆಯ ನಿರ್ವಹಣೆ ಹೊಣೆ ಹೊತ್ತಿದ್ದ ಆರ್ ಬಿ ಟೆಕ್ ಕಂಪನಿಯದ್ದಾಗಿದೆ. ಇಲ್ಲಿಯೂ ನಿಯಮಬಾಹೀರ ಗುತ್ತಿಗೆ ನೀಡಿ ₹೩೦ ಲಕ್ಷ ನಷ್ಟ ಉಂಟುಮಾಡಲಾಗಿದೆ. ಆಂತರಿಕ ಸ್ವಚ್ಛತೆ ಹೆಸರಿನಲ್ಲಿ ₹೪.೪೦ ಲಕ್ಷ ನೀಡಿದ್ದು ಇದಕ್ಕೆ ಸ್ವತಃ ಆರ್‌ಬಿಟೆಕ್ ಕಂಪನಿ ಸಮ್ಮತಿಯ ಯಾವುದೇ ದಾಖಲೆ ನೀಡಿಲ್ಲ. ಈ ಹಣವನ್ನು ಆಡಳಿತ ಮಂಡಳಿಯೇ ಲಪಟಾಯಿಸಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.

ಮೈಷುಗರ್ ಕಾರ್ಖಾನೆಯನ್ನು ತಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಂಡಿರುವ ಅಧ್ಯಕ್ಷ ಸಿ.ಡಿ.ಗಂಗಾಧರ್, ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರನ್ನು ಪದಚ್ಯುತಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಗೋಷ್ಠಿಯಲ್ಲಿ ಹೆಚ್.ಡಿ.ಜಯರಾಂ, ವೆಂಕಟೇಶ್, ಕುಮಾರ, ಸೋಮಶೇಖರ್, ಎಸ್.ಕೆ.ರಾಜೂಗೌಡ, ಚಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ