ಎಂಡಿಎ ತೀರ್ಮಾನ ಸಚಿವರ ಮನೆಯಲ್ಲಿ ?

KannadaprabhaNewsNetwork |  
Published : Jul 16, 2026, 01:15 AM IST
8 | Kannada Prabha

ಸಾರಾಂಶ

ಪ್ರಾಧಿಕಾರದ ಪ್ರಮುಖ ನಿರ್ಧಾರಗಳು ಮತ್ತು ಫೈಲ್‌ಗಳ ವಿಲೇವಾರಿ ಈಗ ಕಚೇರಿಯ ಬದಲಿಗೆ ನಗರಾಭಿವೃದ್ಧಿ ಸಚಿವರ ಕಚೇರಿ, ನಿವಾಸದಲ್ಲಿ ನಡೆಯುತ್ತಿದೆ. ಮಂಜೂರಾತಿ ಪತ್ರ ಇಟ್ಟುಕೊಳ್ಳುವ ಸ್ಟೋರ್‌ ನಿಂದಲೇ ಪತ್ರಗಳು ರವಾನೆ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಗಳು ನಗರಾಭಿವೃದ್ಧಿ ಸಚಿವರ ಮನೆಯಲ್ಲಿ ನಡೆಯುತ್ತಿದ್ದು, ಪ್ರಾಧಿಕಾರದ ಈ ಹಿಂದಿನ ಆಯುಕ್ತ ಕೆ.ಆರ್‌. ರಕ್ಷಿತ್‌ ಅವಧಿಯಲ್ಲಿನ ಎಲ್ಲಾ ತೀರ್ಮಾನಗಳನ್ನು ಸರ್ಕಾರ ಅಮಾನತ್ತಿನಲ್ಲಿಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ರಘು ಆರ್‌. ಕೌಟಿಲ್ಯ ಒತ್ತಾಯಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅಭಿವೃದ್ಧಿ ಕಾಯಂ ಅಧಿಕಾರಿಗಳಿಲ್ಲದೆ ಆಡಳಿತಾತ್ಮಕವಾಗಿ ಸೊರಗುತ್ತಿದೆ. ಪ್ರಾಧಿಕಾರದ ಪ್ರಮುಖ ನಿರ್ಧಾರಗಳು ಮತ್ತು ಫೈಲ್‌ಗಳ ವಿಲೇವಾರಿ ಈಗ ಕಚೇರಿಯ ಬದಲಿಗೆ ನಗರಾಭಿವೃದ್ಧಿ ಸಚಿವರ ಕಚೇರಿ, ನಿವಾಸದಲ್ಲಿ ನಡೆಯುತ್ತಿದೆ. ಮಂಜೂರಾತಿ ಪತ್ರ ಇಟ್ಟುಕೊಳ್ಳುವ ಸ್ಟೋರ್‌ ನಿಂದಲೇ ಪತ್ರಗಳು ರವಾನೆಯಾಗಿವೆ ಎಂದು ದೂರಿದರು.ನಿವೇಶನ ಹಂಚಿಕೆ ಸಂಬಂಧ ಯತೀಂದ್ರ ಅವರು ಕುಟುಂಬ ಸದಸ್ಯರ ವಿರುದ್ಧ ತನಿಖೆ ನಡೆಯುತ್ತಿರುವ ವೇಳೆಯಲ್ಲಿ ಅವರಿಗೆ ನಗರಾಭಿವೃದ್ಧಿ ಖಾತೆ ನೀಡಿರುವುದು ಸರಿಯಲ್ಲ. ಕೂಡಲೇ ಆ ಖಾತೆಯನ್ನು ಹಿಂದಕ್ಕೆ ಪಡೆಯಬೇಕು. ಆರೋಪ ಮುಕ್ತವಾದರೆ ಯಾವುದಾದರೂ ಖಾತೆ ನೀಡಲಿ ಎಂದು ಅವರು ಆಗ್ರಹಿಸಿದರು.ಅಕ್ರಮವಾಗಿ ಪಡೆದ ನಿವೇಶನ ಸಕ್ರಮಗೊಳಿಸುವ ಕೆಲಸ ನಡೆಯುತ್ತಿದೆ. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿಯೇ ರಕ್ಷಿತ್ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ರಕ್ಷಿತ್ ಅವರ ಅವಧಿಯಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಅಮಾನತು ಪಡಿಸಬೇಕು ಎಂದರು.ಮೈಸೂರಿನ ಪ್ರಮುಖ ಯೋಜನಾ ಪ್ರಾಧಿಕಾರವಾದ ಎಂಡಿಎ ಸದ್ಯ ಯಾವುದೇ ಕಾಯಂ ಅಧಿಕಾರಿಗಳಿಲ್ಲ. ಆಯುಕ್ತರು, ಭೂಸ್ವಾಧೀನಾಧಿಕಾರಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಹಾಗೂ ಎಕ್ಸಿಕ್ಯೂಟಿವ್ ಎಂಜಿನಿಯರ್ ಸೇರಿದಂತೆ ಪ್ರಮುಖ ಆಡಳಿತಾತ್ಮಕ ಹುದ್ದೆಗಳು ಖಾಲಿ ಬಿದ್ದಿದ್ದು, ಸಾರ್ವಜನಿಕರ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದರು.ಪ್ರಾಧಿಕಾರದ ಘನತೆಗೆ ತಕ್ಕಂತೆ ಕೂಡಲೇ ಪ್ರಾದೇಶಿಕ ಆಯುಕ್ತರ ದರ್ಜೆಯ ಹಿರಿಯ ಐಎಎಸ್ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಬೇಕು. ಕೆಎಎಸ್ ಅಥವಾ ಎಸಿ ದರ್ಜೆಯ ಅಧಿಕಾರಿ ನೇಮಿಸಬಾರದು. ಎಂಡಿಎ ಹಗರಣದಲ್ಲಿ ಏನಾಯಿತು ಎಂಬುದನ್ನು ಸರ್ಕಾರ ಹೇಳುತ್ತಿಲ್ಲ. ಮುಗ್ಧರಿಗೆ ಅನ್ಯಾಯವಾಗಿದೆ. ಕಾನೂನು ಪ್ರಕಾರ ನಡೆದುಕೊಳ್ಳಲು ಸಾಧ್ಯವಿಲ್ಲ. ಲೋಕಾಯುಕ್ತರು ಕೂಡ ಈ ಹಿಂದಿನ ಮುಖ್ಯಮಂತ್ರಿಗಳನ್ನು ಉಳಿಸಲು ರಕ್ಷಣಾತ್ಮಕ ಆಟವಾಡಿದ್ದಾರೆ ಎಂದು ಅವರು ದೂರಿದರು.ಎಂಡಿಎ ಹಗರಣದ ಕೂಲಂಕುಶ ತನಿಖೆಯಾಗದಿದ್ದಲ್ಲಿ ವ್ಯಾಪಕ ಹೋರಾಟ ನಡೆಸಬೇಕಾಗುತ್ತದೆ. ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಪ್ರಮೋಷನ್ ಮೇಲೆ ಪ್ರಮೋಷನ್ ನೀಡಲಾಗುತ್ತಿದೆ. ಮುಡಾದಲ್ಲಿ ನಡೆದಿರುವ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣ ಒಂದು ವ್ಯವಸ್ಥಿತ ಲೂಟಿಯಾಗಿದ್ದು, ಇದರ ಹಿಂದೆ ಸರ್ಕಾರದ ಸಚಿವಾಲಯ ಮಟ್ಟದ ಹಿರಿಯ ಅಧಿಕಾರಿಗಳ ಕೈವಾಡ ಇದೆ. 2015ರ ನಂತರದ ಹೊಸ ಬಡಾವಣೆಗಳಿಗೆ ಮಾತ್ರ ಅನ್ವಯಿಸಬೇಕಿದ್ದ ಈ ನಿಯಮವನ್ನು, ಹಳೆಯ ಪ್ರಕರಣಗಳಿಗೂ ವಿಸ್ತರಿಸಲಾಗಿದೆ. ಇದು ನಿಯಮ ಬಾಹಿರ ಎಂದರು.ತಾಂತ್ರಿಕ ಸಮಿತಿ ಇದನ್ನು ಅಕ್ರಮ ಎಂದು ಸ್ಪಷ್ಟಪಡಿಸಿದ್ದರೂ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಮೈಸೂರಿನ ಸಮಗ್ರ ಹಿತದೃಷ್ಟಿಯಿಂದ, ಎಂಡಿಎ ರಕ್ಷಣೆಗಾಗಿ ಮುಖ್ಯಮಂತ್ರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಈ ಅವಧಿಯಲ್ಲಿ ನಡೆದ ಮುಡಾ ಸಭೆಯ ಎಲ್ಲಾ ತೀರ್ಮಾನಗಳನ್ನು ಸರ್ಕಾರ ಕೂಡಲೇ ಅಮಾನತುಗೊಳಿಸಿ, ಸಮಗ್ರ ತನಿಖೆ ನಡೆಸಬೇಕು. ಅಕ್ರಮವಾಗಿ ಹಂಚಲಾದ ಎಲ್ಲಾ ನಿವೇಶನಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಕಾನೂನು ಪ್ರಕಾರ ಈ ಹಂಚಿಕೆ ಉಳಿಯುವುದಿಲ್ಲವಾದ್ದರಿಂದ, ಸಾರ್ವಜನಿಕರು ಯಾರೂ 50:50 ಅನುಪಾತದ ನಿವೇಶನ ಖರೀದಿಸಬಾರದು ಎಂದು ಅವರು ತಿಳಿಸಿದರು.ದಸರಾ ಮಹೋತ್ಸವದ ಸಾಂಸ್ಕೃತಿಕ ಪರಂಪರೆ ಉಳಿಸಬೇಕು. ಹಿಂದೆ ಪಂಡಿತ್ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರಂತಹ ದಿಗ್ಗಜರು ಸಂಗೀತ ಸುಧೆ ಹರಿಸಿದ್ದ ಅರಮನೆ ಆವರಣದಲ್ಲಿ, ಕಳೆದ ಬಾರಿ ಅಬ್ಬರದ ಡಿಜೆ ಹಾಕಿ ಸಾಂಸ್ಕೃತಿಕ ವಾತಾವರಣ ಕೆಡಿಸಲಾಗಿತ್ತು. ಈ ಬಾರಿ ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಅವಕಾಶ ನೀಡಬೇಕು, ಡಿಜೆ ನಿಷೇಧಿಸಬೇಕು. ಇಲಾಖಾ ಸ್ತಬ್ಧಚಿತ್ರಗಳ ಬದಲಿಗೆ, ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ಪ್ರತಿ ಕಂದಾಯ ವಿಭಾಗಕ್ಕೆ ಒಂದು ಉತ್ಕೃಷ್ಟ ಸ್ತಬ್ಧಚಿತ್ರ ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.ದಸರಾ ವಸ್ತುಪ್ರದರ್ಶನದ ಟೆಂಡರ್ ಪ್ರಕ್ರಿಯೆಯಲ್ಲಿ ಏಕಸ್ವಾಮ್ಯ ತಪ್ಪಿಸಬೇಕು. ಸಾರ್ವಜನಿಕರ ಸಮಯ ಹಾಗೂ ಸರ್ಕಾರದ ಹಣ ಉಳಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಮಳಿಗೆಗಳನ್ನು ಒಂದೇ ಸೂರಿನಡಿ ತರುವ ಲೀಡ್ ಪೆವಿಲಿಯನ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ ಡೌನ್ ಬಿಲ್ಡಿಂಗ್, ವಸಂತ್ ಮಹಲ್ ಸೇರಿದಂತೆ ಮೈಸೂರಿನ 130 ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ದಸರಾ ಉದ್ಘಾಟನೆಗೂ ಮುನ್ನ ಸರ್ಕಾರ ಇವುಗಳ ರಕ್ಷಣೆಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮಪ್ರಸಾದ್, ಮಾಧ್ಯಮ ವಕ್ತಾರ ಕಿರಣ್ ಗೌಡ, ಸಂಚಾಲಕ ಮಹೇಶ್ ರಾಜೇ ಅರಸ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ