ಕುಮಟಾ: ನಾಕುತಂತಿ ಬದುಕಿನ ಸಮನ್ವಯತೆಯ ಸಾರ ಹೊಂದಿದೆ. ಬದುಕಿಗೂ ಮತ್ತು ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧ ಗಟ್ಟಿಯಾದಾಗ ಮಾತ್ರ ಬಾಳು ಸುಂದರವಾಗುತ್ತದೆ ಎಂದು ಹಿರಿಯ ಸಾಹಿತಿ ಪುಟ್ಟು ಕುಲಕರ್ಣಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ, ಸಾಮಾನ್ಯ ಜನರು ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ನಾಕುತಂತಿಯ ಕುರಿತು ಉಪನ್ಯಾಸ ಏರ್ಪಡಿಸಿರುವುದು ಸಾಹಿತ್ಯ ಪರಿಷತ್‌ನ ಸ್ತುತ್ಯಾರ್ಹ ಕಾರ್ಯ ಎಂದರು.
ಮುಖ್ಯ ಅತಿಥಿ ನಿಕಟಪೂರ್ವ ಕಸಾಪ ತಾಲೂಕಾಧ್ಯಕ್ಷ ಡಾ. ಶ್ರೀಧರಗೌಡ ಉಪ್ಪಿನಗಣಪತಿ ಮಾತನಾಡಿ, ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯ. ಬೇಂದ್ರೆಯವರು ತಾವು ಎದುರಿಸಿದ ಸಂಕಷ್ಟದ ದಿನಗಳಿಗೆ ಸಾಹಿತ್ಯದ ಲೇಪನದ ಮೂಲಕ ಕನ್ನಡ ಭಾಷೆ ಶ್ರೀಮಂತಗೊಳಿಸಿದರು ಎಂದರು.ಡಯಟ್‌ನ ಹಿರಿಯ ಉಪನ್ಯಾಸಕ ರಾಜೇಂದ್ರ ಎಲ್.ಭಟ್ ಮಾತನಾಡಿ, ನಾಕುತಂತಿ ಉಪನ್ಯಾಸದ ಮೂಲಕ ಸಾಹಿತ್ಯ ಪರಿಷತ್ ಭಾವಿ ಶಿಕ್ಷಕರಲ್ಲಿ ಸಾಹಿತ್ಯದ ಬೀಜ ಬಿತ್ತುವ ಕೆಲಸ ಮಾಡಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಪ್ರಮೋದ್ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಯಟ್ ಪಿಎಸ್‌ಟಿಇ ವಿಭಾಗದ ಮುಖ್ಯಸ್ಥ ಶಾಂತೇಶ ಆರ್.ನಾಯಕ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವಿನೋದ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ವೀಣಾ ಎಂ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವೀಣಾ ಟಿ. ನಾಯ್ಕ ವಂದಿಸಿದರು. ಅರವಿಂದ ನಾಯಕ, ಆರ್.ಎನ್. ಪಟಗಾರ, ಮೋಹನ ನಾಯ್ಕ ಕೂಜಳ್ಳಿ, ಸಂಧ್ಯಾ ಭಟ್, ಲಕ್ಷ್ಮಿ ನಾಯ್ಕ, ಎಸ್.ಬಿ. ನಾಯಕ ಇನ್ನಿತರರು ಪಾಲ್ಗೊಂಡಿದ್ದರು.