ನಬಾರ್ಡ್ ನಿರ್ಧಾರದಿಂದ ಕೃಷಿಗೆ ಹಿನ್ನಡೆ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Nov 13, 2024, 12:00 AM IST
454 | Kannada Prabha

ಸಾರಾಂಶ

ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 30 ಲಕ್ಷ ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದೆ.

ಹುಬ್ಬಳ್ಳಿ:

ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದ್ದು, ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಒತ್ತಾಯಿಸಿದರು.

ಅವರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 30 ಲಕ್ಷ ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದ್ದು, ಇದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿದರು.

ನಬಾರ್ಡ್ ನೀಡುವ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತದಿಂದಲೇ ಡಿಸಿಸಿ ಬ್ಯಾಂಕುಗಳು ರೈತರಿಗೆ ಕೃಷಿ ಸಾಲ ವಿತರಣೆ ಮಾಡುತ್ತವೆ. ರಾಜ್ಯದಲ್ಲಿ ಕೆಲವೇ ಡಿಸಿಸಿ ಬ್ಯಾಂಕ್‌ಗಳು ಮಾತ್ರ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ಇತರ ಡಿಸಿಸಿ ಬ್ಯಾಂಕ್‌ಗಳು ನಬಾರ್ಡ್ ನೀಡುವ ಹಣದಲ್ಲೇ ರೈತರಿಗೆ ಕೃಷಿಸಾಲ ನೀಡುತ್ತವೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯ ಕಡಿಮೆಯಾಗಲಿದೆ. ಇದರಿಂದ ಕೃಷಿಗೆ ಹಿನ್ನಡೆಯಾಗಲಿದೆ ಎಂದರು.

30ರಿಂದ 35 ಲಕ್ಷ ರೈತರು ಮಾತ್ರ ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕ್‌ಗಳನ್ನು ಆಶ್ರಯಿಸಿದ್ದಾರೆ. ಇತರ ಸುಮಾರು 35 ಲಕ್ಷ ರೈತರು ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಎಲ್ಲ ರೈತರಿಗೂ ಸಹಕಾರಿ ಬ್ಯಾಂಕ್‌ಗಳ ಮೂಲಕವೇ ಕೃಷಿ ಸಾಲ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ. ಆದರೆ, ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಈ ಉದ್ದೇಶಕ್ಕೆ ಪೆಟ್ಟು ಬೀಳಲಿದೆ ಎಂದು ಪಾಟೀಲ ಹೇಳಿದರು.

ನಬಾರ್ಡ್ ವರ್ಷದಿಂದ ವರ್ಷಕ್ಕೆ ರಿಯಾಯಿತಿ ಬಡ್ಡಿ ದರದ ಸಾಲ ಕಡಿಮೆ ಮಾಡುತ್ತ ಬಂದಿದ್ದು ಈಗ ಸುಮಾರು ₹20 ಸಾವಿರ ಕೋಟಿ ಕಡಿಮೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ಶೇ. 40ರಷ್ಟು ಇದ್ದ ಸಾಲದ ಪ್ರಮಾಣ ಈಗ ಶೇ. 20ಕ್ಕೆ ಬಂದಿದೆ. ಕೃಷಿ ವಲಯದ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ ಸಾಲದ ಮೊತ್ತವನ್ನು ಕಡಿಮೆ ಮಾಡಬಾರದು ಎಂದರು.

ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಆರಂಭ ಮಾಡಿದೆ. ಆದರೆ, ಯಾವ ಉದ್ದೇಶಕ್ಕೆ ಸಹಕಾರ ಸಚಿವಾಲಯ ಆರಂಭಿಸಲಾಗಿದೆ ಎಂಬುದು ಗೊತ್ತಿಲ್ಲ. ಈ ಇಲಾಖೆಯಿಂದ ಯಾವುದೇ ರಾಜ್ಯಗಳಿಗೆ ಅನುಕೂಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲವು ಡಿಸಿಸಿ ಬ್ಯಾಂಕುಗಳೂ ಸೇರಿದಂತೆ ಅಪೆಕ್ಸ್ ಬ್ಯಾಂಕ್ ಕೂಡ ಹೆಚ್ಚಿನ ಸ್ವಂತ ಬಂಡವಾಳ ಹೊಂದಿಲ್ಲ. ಹೀಗಾಗಿ ನಬಾರ್ಡ್ ನೆರವನ್ನು ಅವಲಂಬಿಸುವುದು ಅನಿವಾರ್ಯ. ಕೃಷಿ ಸಾಲ ವಿತರಣೆಯಿಂದ ಡಿಸಿಸಿ ಬ್ಯಾಂಕ್‌ಗಳ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿಲ್ಲ. ರಾಜ್ಯದ ಕೆಲವು ಡಿಸಿಸಿ ಬ್ಯಾಂಕ್‌ಗಳು ಮಾತ್ರ ವಾಣಿಜ್ಯ ಸಾಲ ವಿತರಣೆ ಮಾಡುವ ಮೂಲಕ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ ಎಂದರು.

ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತ ಕಡಿತ ಮಾಡದಂತೆ ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಬಳಿ ನಿಯೋಗ ತೆರಳುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಈ ಬಗ್ಗೆ ತಕ್ಷಣ ಕೇಂದ್ರಕ್ಕೆ ಪತ್ರ ಬರೆಯುವ ಬಗ್ಗೆ ಕೂಡ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗುವುದು ಎಂದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ