ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಗೌರವ ಪದವಿಗೆ ಬೀದರ್‌ನ ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ತೇಜಸ್ವಿ ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಸಿ. ಶರ್ಮಾ ಭಾಜನರಾಗಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ನಾಡೋಜ ಗೌರವ ಪದವಿಯನ್ನು ಈ ಮೂವರು ಸಾಧಕರಿಗೆ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಪ್ರಕಟಿಸಿದರು.ಕನ್ನಡ ವಿವಿಯ ನವರಂಗ ಬಯಲು ಮಂದಿರದಲ್ಲಿ ಜ. ೧೦ರಂದು ಸಂಜೆ ೫.೩೦ಕ್ಕೆ ನಡೆಯಲಿರುವ ೩೨ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಡಿಲಿಟ್ ಹಾಗೂ ೨೬೪ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಿದ್ದಾರೆ.ಅನಂತಪುರದ ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎ. ಕೋರಿ ಅವರು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.
164 ಪದವಿ ಪ್ರದಾನ: ಭಾಷಾ ನಿಕಾಯದಲ್ಲಿ ೧೦೦ ವಿದ್ಯಾರ್ಥಿಗಳು, ಸಮಾಜವಿಜ್ಞಾನ ನಿಕಾಯದಲ್ಲಿ ೧೬೦ ವಿದ್ಯಾರ್ಥಿಗಳು ಹಾಗೂ ಲಲಿತಕಲೆಗಳ ನಿಕಾಯದಲ್ಲಿ ೪ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿಗೆ ಅರ್ಹರಾಗಿದ್ದಾರೆ ಎಂದರು.ಅತಿ ಕಡಿಮೆ ಸಂಖ್ಯೆಯಿರುವ ಕೇರಳದ ಪಣಿಯನ್ ಬುಡಕಟ್ಟು ಸಮುದಾಯದ ಕುರಿತು ಸಂಶೋಧನೆಯನ್ನು ಅದೇ ಸಮುದಾಯದ ವಿದ್ಯಾರ್ಥಿನಿ ದಿವ್ಯ ಅವರು ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪಿಎಚ್‌ಡಿ ಪಡೆಯಲಿದ್ದು, ಇದು ಕನ್ನಡ ವಿಶ್ವವಿದ್ಯಾಲಯಕ್ಕೂ ಮತ್ತು ಪಣಿಯನ್ ಸಮುದಾಯಕ್ಕೂ ಹೆಮ್ಮೆಯ ವಿಷಯ ಎಂದರು.ಘಟಿಕೋತ್ಸವ ಮುನ್ನ ದಿನವಾದ ಜ. ೯ರಂದು ಮಂಟಪ ಸಭಾಂಗಣದಲ್ಲಿ ಪ್ರಸಾರಂಗದಿಂದ ಪ್ರಕಟಣೆಗೊಂಡ ೫೧ ಪುಸ್ತಕಗಳನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅವರು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಲಕ್ಷ್ಮಣ ತೆಲಗಾವಿ ಮಾತನಾಡಲಿದ್ದಾರೆ ಎಂದರು.
ಕುಲಸಚಿವ ಡಾ. ವಿಜಯಪೂಣಚ್ಚ ತಂಬಂಡ, ಡೀನ್‌ರಾದ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಚಲುವರಾಜ, ಡಾ. ಶಿವಾನಂದ ವಿರಕ್ತಮಠ, ಡಾ. ಶೈಲಜಾ ಹಿರೇಮಠ, ಹಣಕಾಸು ಅಧಿಕಾರಿ ಡಾ. ದಿನೇಶ್ ಕೆ., ಅಧ್ಯಯನಾಂಗ ನಿರ್ದೇಶಕ ಡಾ. ಪಿ. ಮಹಾದೇವಪ್ಪ, ಮಾಹಿತಿ ಕೇಂದ್ರ ನಿರ್ದೇಶಕಿ ಡಿ. ಮೀನಾಕ್ಷಿ ಇತರರು ಇದ್ದರು.ನಾಡೋಜ ಪುರಸ್ಕೃತರ ಪರಿಚಯ:ಡಾ. ಬಸವಲಿಂಗ ಪಟ್ಟದೇವರುಕಲ್ಯಾಣ ಕರ್ನಾಟಕ ಭಾಗವಾದ ಬೀದರಿನ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು 1950ರ ಆ. ೨೫ರಂದು ಜನಿಸಿದರು. ಬಸವತತ್ವವನ್ನೇ ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಿದ್ದ ಪೂಜ್ಯ ಲಿಂ. ಡಾ. ಚನ್ನಬಸವ ಪಟ್ಟದ್ದೇವರ ಬಸವಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು. ಗಡಿಭಾಗವಾದ ಬೀದರ್ ಪರಿಸರದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಪ್ರಜ್ಞೆಯನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದರು. ಡಾ. ಬಸವಲಿಂಗ ಪಟ್ಟದ್ದೇವರು ಬಹುಭಾಷಿಕ ವಿದ್ವಾಂಸರು. ಶರಣ ಸಾಹಿತ್ಯ ಕುರಿತು ೩೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಕೃತಿಗಳು ಮರಾಠಿ, ತೆಲುಗು ಭಾಷೆಗೆ ಅನುವಾದಗೊಂಡು ಜನಪ್ರಿಯತೆ ಪಡೆದಿವೆ. ಪೂಜ್ಯರಿಗೆ ಬಸವತತ್ವ ಪ್ರಸಾರವೇ ಪ್ರಾಣಜೀವಾಳವಾಗಿದೆ.ಪ್ರೊ, ತೇಜಸ್ವಿ ವಿ. ಕಟ್ಟಿಮನಿ
ಪ್ರೊ. ತೇಜಸ್ವಿ ವೆಂಕಪ್ಪ ಕಟ್ಟಿಮನಿ ಅವರು 1955ರ ಜೂ. ೧೪ರಂದು ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಹಿಂದಿ ವಿಷಯದಲ್ಲಿ ಎಂ.ಎ. ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ೪೪ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿರುವ ಪ್ರೊ. ತೇಜಸ್ವಿ. ಕಟ್ಟಿಮನಿಯವರು ೨೦೧೪ರಿಂದ ೨೦೧೯ರ ವರೆಗೆ ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಆಂಧ್ರಪ್ರದೇಶ ವಿಜಯನಗರದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಬದ್ಧತೆಯೊಂದಿಗೆ ತಮ್ಮ ಬರಹಗಳನ್ನು ಆರಂಭಿಸಿರುವ ಶ್ರೀಯುತರು ಕನ್ನಡ, ಹಿಂದಿ, ಗುಜರಾತಿ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಸಾಹಿತ್ಯ ಮತ್ತು ಸಾಹಿತ್ಯೇತರ ೨೫ಕ್ಕೂ ಹೆಚ್ಚು ಕೃತಿಗಳನ್ನು ಅನುವಾದ ಮಾಡಿ ಸಮರ್ಥ ಅನುವಾದಕರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.ಪ್ರೊ. ಎಸ್.ಸಿ. ಶರ್ಮಾತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಸಿ. ಶರ್ಮಾ ಅವರು 1959ರ ಮಾ. ೨೭ರಂದು ಜನಿಸಿದರು. ೧೯೮೪ರಲ್ಲಿ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿಇ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೮೮ರಲ್ಲಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಮೆಟೇರಿಯಲ್ ಕಾಸ್ಟಿಂಗ್ ಸೈನ್ಸ್ ಮತ್ತು ಎಂಜಿನಿಯರಿಂಗ್(ಲೋಹದ ಎರಕ ವಿಜ್ಞಾನ ಮತ್ತು ಎಂಜಿನಿಯರಿಂಗ್) ವಿಷಯದಲ್ಲಿ ಎಂಇ ಪದವಿಯನ್ನು ಪಡೆದರು. ೧೯೯೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಪೂರೈಸಿದರು. ನಾಡಿನ ಬೇರೆಬೇರೆ ೨೭ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಪಾಲ್ಗೊಂಡು ಯುವ ಮನಸ್ಸುಗಳಿಗೆ ಭಾರತೀಯ ಸಂಸ್ಕೃತಿ, ಪರಂಪರೆ, ಶಿಕ್ಷಣ ಹಾಗೂ ತಾಂತ್ರಿಕ ವಿಷಯವನ್ನೊಳಗೊಂಡ ಘಟಿಕೋತ್ಸವ ಭಾಷಣ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ. ರಾಜ್ಯ- ರಾಷ್ಟ್ರ- ಅಂತಾರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಕುಲಪತಿಗಳಾಗಿ, ನ್ಯಾಕ್ ಕಮಿಟಿ ನಿರ್ದೇಶಕರಾಗಿ, ಆಡಳಿತಾತ್ಮಕ ಸಲಹೆಗಾರರಾಗಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅನೇಕ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ೩೭ ಜನ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದಿದ್ದಾರೆ.