ನಾಗಮಂಗಲ: ಸರ್ಕಾರಿ ಗೋಮಾಳಕ್ಕೆ ತಂತಿ ಬೇಲಿ..!

KannadaprabhaNewsNetwork |  
Published : May 13, 2026, 12:15 AM IST
ನಾಗಮಂಗಲ: ಸರ್ಕಾರಿ ಗೋಮಾಳಕ್ಕೆ ತಂತಿ ಬೇಲಿ | Kannada Prabha

ಸಾರಾಂಶ

ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ರು. ಆರ್ಥಿಕ ಮೌಲ್ಯದ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ನಾಗಮಂಗಲ ತಾಲೂಕಿನಲ್ಲಿ ಮತ್ತೊಂದು ಭೂ ಕಬಳಿಕೆ ಪ್ರಕರಣ ಸದ್ದು ಮಾಡುತ್ತಿದೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ರು. ಆರ್ಥಿಕ ಮೌಲ್ಯದ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ತಾಲೂಕಿನಲ್ಲಿ ಮತ್ತೊಂದು ಭೂ ಕಬಳಿಕೆ ಪ್ರಕರಣ ಸದ್ದು ಮಾಡುತ್ತಿದೆ.

ತಾಲೂಕಿನ ಬೆಳ್ಳೂರು ಹೋಬಳಿಯ ಕತ್ತರಗುಪ್ಪೆ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಗೋಮಾಳದ ಭೂಮಿಯಲ್ಲಿ ಸ್ಥಳೀಯರಲ್ಲದ ವ್ಯಕ್ತಿಯೊಬ್ಬರು ಅಕ್ರಮವಾಗಿ ತಂತಿಬೇಲಿ ಹಾಕಿ ಶೆಡ್ ನಿರ್ಮಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ಸರ್ಕಾರಿ ಗೋಮಾಳವನ್ನು ರಕ್ಷಿಸುವಂತೆ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಕತ್ತರಗುಪ್ಪೆ ಗ್ರಾಮದ ಸರ್ವೇ ನಂ.19ರಲ್ಲಿ ಒಟ್ಟು 60.3 ಎಕರೆ ಸರ್ಕಾರಿ ಗೋಮಾಳವಿದೆ. ಈ ಭೂಮಿಯಲ್ಲಿ ಜಮೀನು ಮಂಜೂರು ಮಾಡಿಕೊಡುವಂತೆ 1988-89ರಲ್ಲಿ ಬಗರ್‌ಹುಕುಂ ಸಾಗುವಳಿ ಸಮಿತಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಕಾರ್ಯ ನಡೆಸಿ ಗ್ರಾಮದ 20ಕ್ಕೂ ಹೆಚ್ಚು ರೈತರಿಗೆ ತಲಾ 2 ರಿಂದ 2.5 ಎಕರೆಯಂತೆ ಕಳೆದ 2022ರಲ್ಲಿ ಕಿಮ್ಮತ್ತು ಕಟ್ಟಿಸಿಕೊಂಡು ಜಮೀನು ಮಂಜೂರು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.ಇದೇ ಸರ್ವೇ ನಂಬರ್‌ನ ಸರ್ಕಾರಿ ಗೋಮಾಳದಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಸ್ಥಳೀಯರಲ್ಲದ ವ್ಯಕ್ತಿಯೊಬ್ಬರು 30 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಅಕ್ರಮವಾಗಿ ತಂತಿ ಬೇಲಿ ಹಾಕಿ ಶೆಡ್ ನಿರ್ಮಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ಥಳೀಯ ಸಾರ್ವಜನಿಕರ ದೂರಿನನ್ವಯ ಸೋಮವಾರ ಮಧ್ಯಾಹ್ನ ತಹಸೀಲ್ದಾರ್ ಜಿ.ಆದರ್ಶ ಅವರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ನಿಮಗೆ ಐದು ಎಕರೆ ಜಮೀನು ಮಂಜೂರಾಗಿದೆಯೇ ಎಂದು ಪ್ರಶ್ನಿಸಿ ಸೂಕ್ತ ದಾಖಲಾತಿಗಳಿದ್ದರೆ ಹಾಜರು ಪಡಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆ ಮಹಿಳೆ ನಮ್ಮ ಹೆಸರಿಗೆ 25 ಎಕರೆ ಜಮೀನು ಮಂಜೂರಾಗಿದೆ. ನಮ್ಮ ಮನೆಯವರು ಹೊರಗೆ ಹೋಗಿದ್ದಾರೆ ಸ್ವಲ್ಪ ಹೊತ್ತು ಇರಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಂತೆ ಒಬ್ಬರ ಹೆಸರಿಗೆ 25 ಎಕರೆ ಮಂಜೂರಾಗಿದೆಯಾ ಎಂದು ಗಾಬರಿಗೊಂಡ ತಹಸೀಲ್ದಾರ್ ಅರ್ಧ ಗಂಟೆಯೊಳಗೆ ಸೂಕ್ತ ದಾಖಲಾತಿ ಒದಗಿಸಬೇಕು ಇಲ್ಲದಿದ್ದರೆ ಅಕ್ರಮವಾಗಿ ನಿರ್ಮಿಸಿರುವ ತಂತಿಬೇಲಿ ಮತ್ತು ಶೇಡ್ ತೆರವುಗೊಳಿಸಬೇಕು ಎಂದು ಗಡುವು ನೀಡಿದರು.

ಚಗರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ!:

ತಾಲೂಕಿನ ಲಾಳನಕೆರೆ ಗ್ರಾಮದ ವಿಳಾಸ ನೀಡಿರುವ ಆ ಮಹಿಳೆ ಈ ಹಿಂದೆ ಲಾಳನಕೆರೆಯ ಚಗರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನು ಮಂಜೂರಾತಿ ಕೋರಿ ಅರ್ಜಿಸಲ್ಲಿಸಿ ಅನುಭವದಲ್ಲಿದ್ದೆವು. ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಲಾಗದೆ ಬೆಂಗಳೂರಿಗೆ ಹೋಗಿದ್ದೆವು ಎಂದು ತಹಸೀಲ್ದಾರ್ ಎದುರು ಹೇಳಿಕೆ ನೀಡಿದ್ದಾರೆನ್ನಲಾಗಿದೆ.

ಅಕ್ರಮ ತಂತಿಬೇಲಿ ಮತ್ತು ಶೇಡ್ ತೆರವು:

ಕತ್ತರಗುಪ್ಪೆ ಗ್ರಾಮದ ಸರ್ವೇ ನಂ.19ರಲ್ಲಿ ನಮಗೆ 25 ಎಕರೆ ಭೂಮಿ ಮಂಜೂರಾಗಿದೆ ಎಂದು ತಹಸೀಲ್ದಾರ್ ಎದುರು ಮೊಂಡುವಾದ ಮಾಡುತ್ತಿದ್ದ ಮಹಿಳೆಯೊಬ್ಬರು ಯಾವುದೇ ದಾಖಲಾತಿ ಒದಗಿಸಲಾಗದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಮತ್ತು ತಂತಿ ಬೇಲಿಯನ್ನು ಪೊಲೀಸರ ನೆರವಿನೊಂದಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ತಹಸೀಲ್ದಾರ್ ಜಿ.ಆದರ್ಶ ಅವರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಮಹಿಳೆಯೊಬ್ಬರು ವಾಗ್ವಾದ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಾಲೂಕಿನಲ್ಲಿ ಬಗೆದಷ್ಟು ಅಕ್ರಮ ಭೂ ಕಬಳಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಈ ಜಾಲದ ಹಿಂದೆ ಅದ್ಯಾವ ದೊಡ್ಡ ಶಕ್ತಿಗಳು ಕೆಲಸ ಮಾಡುತ್ತಿರಬಹುದೆಂಬುದು ಪ್ರಶ್ನೆಯಾಗಿದೆ.

ಮುಖ್ಯಾಂಶ

- ಖಾಸಗಿ ವ್ಯಕ್ತಿ ಒಬ್ಬರಿಂದ ಅಕ್ರಮ ಶೆಡ್ ನಿರ್ಮಾಣ

- ಗ್ರಾಮಸ್ಥರಿಂದ ಪ್ರತಿಭಟನೆ, ಗೋಮಾಳ ರಕ್ಷಣೆಗೆ ತಹಸೀಲ್ದಾರ್‌ಗೆ ದೂರು

- 30 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಅಕ್ರಮ ತಂತಿ ಬೇಲಿ ನಿರ್ಮಾಣ

- ಸ್ಥಳೀಯರಲ್ಲದ ವ್ಯಕ್ತಿಯೊಬ್ಬರಿಗೆ ಭೂಮಿ ಮಂಜೂರು

- ಚಗರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದ ಮಹಿಳೆ

- ಬಗೆದಷ್ಟು ಅಕ್ರಮ ಭೂ ಕಬಳಿಕೆ ಪ್ರಕರಣಗಳು ಬೆಳಕಿಗೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಯಷ್ಟೇ ಅಲ್ಲ, ಸಾರ್ಥಕ ಸೇವೆಯ ಸಮರ್ಪಣೆ
ಸಾಂಸ್ಕೃತಿಕ ಮನಸ್ಸು ಇಲ್ಲದಿರುವುದೇ ಯುದ್ಧಕ್ಕೆ ಕಾರಣ