ಸಹಕಾರ ಕ್ಷೇತ್ರದ ಮೊದಲ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಇರುವ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯು ಜನಾರೋಗ್ಯ ರಕ್ಷಣೆಗೆ ಇನ್ನಷ್ಟು ಆರೋಗ್ಯ ಸೇವೆಗಳನ್ನು ಒದಗಿಸುವದು ಹಾಗೂ ಅತೀ ಕಡಿಮೆ ವೆಚ್ಚದಲ್ಲಿ, ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆಯು ಆಧುನಿಕ ಚಿಕಿತ್ಸಾ ಉಪಕರಣಗಳೊಂದಿಗೆ ಸಜ್ಜಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಸಹಕಾರ ಕ್ಷೇತ್ರದ ಮೊದಲ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಇರುವ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯು ಜನಾರೋಗ್ಯ ರಕ್ಷಣೆಗೆ ಇನ್ನಷ್ಟು ಆರೋಗ್ಯ ಸೇವೆಗಳನ್ನು ಒದಗಿಸುವದು ಹಾಗೂ ಅತೀ ಕಡಿಮೆ ವೆಚ್ಚದಲ್ಲಿ, ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆಯು ಆಧುನಿಕ ಚಿಕಿತ್ಸಾ ಉಪಕರಣಗಳೊಂದಿಗೆ ಸಜ್ಜಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.ಅವರು ಆಸ್ಪತ್ರೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2025-26 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಭವಿಷ್ಯದ ಯೋಜನೆಗಳನ್ನು ಮುಂದಿಟ್ಟು, ಎಲ್ಲರ ಸಹಕಾರ ಕೋರಿದರು.ಸಹಕಾರ ಕ್ಷೇತ್ರದ ಭೀಷ್ಮ ಎಂದೇ ಹೆಸರಾಗಿದ್ದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಜನಾರೋಗ್ಯ ರಕ್ಷಣೆಗೆ ಈ ಆಸ್ಪತ್ರೆಯನ್ನು ಕಟ್ಟಿ ಬೆಳೆಸಿದ್ದಾರೆ. ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿಯವರ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿಯವರ ಮತ್ತು ಆಡಳಿತ ಮಂಡಳಿಯ ಸಹಕಾರದೊಂದಿಗೆ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದೇನೆ ಎಂದು ಹೇಳಿದರು.ಪೂಜ್ಯ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು 350 ಹಾಸಿಗೆಯುಳ್ಳ ಆಸ್ಪತ್ರೆಯೊಂದಿಗೆ ವೈದ್ಯಕೀಯ ಕಾಲೇಜು ಸ್ಫಾಪಿಸುವ ಕನಸು ಹೊಂದಿದ್ದರು. ಇದಕ್ಕಾಗಿ ಲಾಲ್‌ಬಾಗ್ ಬಳಿ 70 ಎಕರೆ, 18 ಗುಂಟೆ ಜಮೀನನ್ನು 4 ಕೋಟಿ ರು. ವೆಚ್ಚದಲ್ಲಿ ಖರೀದಿಸಿದ್ದರು. ಈ ಪೈಕಿ 64 ಎಕರೆ 24 ಗುಂಟೆ ಜಮೀನಿನ ಕ್ರಯಪತ್ರವನ್ನು ಆಸ್ಪತ್ರೆ ಹೆಸರಿಗೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ನೆನಪಿಗಾಗಿ ನವೆಂಬರ್ 11ರಂದು ಶೇ.50ರಷ್ಟು ರಿಯಾಯಿತಿಯಲ್ಲಿ ಎಲ್ಲ ತಪಾಸಣೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.ಆಸ್ಪತ್ರೆಯ ಉಪಾಧ್ಯಕ್ಷರೂ ಆಗಿರುವ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ನಿರ್ದೇಶಕರಾದ ಎಂಎಲ್‌ಸಿ ಭೀಮರಾವ್ ಪಾಟೀಲ್, ಡಿ.ಕೆ.ಸಿದ್ರಾಮ, ಡಾ.ಚಂದ್ರಕಾಂತ ಗುದಗೆ, ಡಾ.ವಿಜಯಕುಮಾರ ಕೋಟೆ, ಡಾ.ರಜನೀಶ ವಾಲಿ, ರಾಜೇಶ್ವರ ನಿಟ್ಟೂರೆ, ಅಶೋಕ ರೇಜಂತಲ್, ರಾಮದಾಸ ಮುಖೇಡಕರ್, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ಹೂಗಾರ, ಸಂತೋಷಕುಮಾರ ತಾಳಂಪಳ್ಳಿ, ಆಕಾಶ ನಾಗಮಾರಪಳ್ಳಿ, ಸೈಯದ್ ಖಿಜರುಲ್ಲ ಹುಸೈನಿ, ರಾಚಪ್ಪ ಪಾಟೀಲ್, ಸಂಜೀವಕುಮಾರ ಸಿದ್ದಾಪುರ, ನರಸಾರೆಡ್ಡಿ ಗುಂಡುರೆಡಿ, ಶಿವಕುಮಾರ ಭಾಲ್ಕೆ, ಗೋವಿಂದ ವಿಶ್ವನಾಥ, ರಾಘವೇಂದ್ರ ಭಗವಾನರಾವ್, ಶಿವಕುಮಾರ್ ಕನ್ನಾ, ಬಾಲಾಜಿ ಚವ್ಹಾಣ, ಆಸ್ಪತ್ರೆ ಸಿಇಒ ಎನ್.ಕೃಷ್ಣಾರೆಡ್ಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
----
ಬಾಕ್ಸ್:
ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ 3.6ಲಕ್ಷ
ಜನರಿಗೆ ಚಿಕಿತ್ಸೆ, 22 ಸಾವಿರ ಎಂಆರ್‌ಐನಗರದ ಮಧ್ಯಭಾಗದಲ್ಲಿ 12 ಕೋಟಿ ರು. ವೆಚ್ಚದಲ್ಲಿ ಈ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಸಾವಿರಾರು ರೈತರ, ಸದಸ್ಯರ, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಈ ಆಸ್ಪತ್ರೆ ಶ್ರಮಿಸುತ್ತಿದೆ. ಆರಂಭದಿಂದ ಇಲ್ಲಿಯವರೆಗೆ ಈವರೆಗೆ 3,60,299 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 2025-26 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಂತೆ 22,048 ಎಂಆರ್‌ಐ, 13,670 ಸಿಟಿ ಸ್ಕ್ಯಾನ್, 22,659 ಎಕ್ಸ್‌ರೇ ಮಾಡಿದ್ದೇವೆ. ಯುಎಸ್‌ಜಿ 4740, ಇಸಿಜಿ 1,07,146, ಲ್ಯಾಬ್ 1,40,912, ಒಪಿಡಿ 16,765, ಐಪಿಡಿ 5508, ಶಸ್ತ್ರಕ್ರಿಯೆ 10,669 ಮಾಡಲಾಗಿದೆ. ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸ್ಟಾರ್ ಹೆಲ್ತ್ ಇನ್ಶುರೆನ್ಸ್, ಯಶಸ್ವಿನಿ ಯೋಜನೆ ಸೇರಿದಿ ವಿವಿಧ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಅಧ್ಯಕ್ಷ ತರುಣ್ ನಾಗಮಾರಪಳ್ಳಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.