ನರಸಿಂಹರಾಜಪುರ: ನಾಗರಪಂಚಮಿ ಹಬ್ಬವನ್ನು ಮಂಗಳವಾರ ತುಂತುರು ಮಳೆಯಲ್ಲೇ ಭಕ್ತರು ದೇವಸ್ಥಾನ,ನಾಗರಕಟ್ಟೆ, ಅಶ್ವತ್ತ ಕಟ್ಟೆಗೆ ತೆರಳಿ ಪೂಜೆ ಸಲ್ಲಿಸಿದರು.
ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮೀಪದ ನಾಗರಕಟ್ಟೆ, ಹಳೇ ಅಂಚೆ ಕಟೇರಿ ಸಮೀಪದ ಅಶ್ವತ್ತ ಕಟ್ಟೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮೀಪದ ನಾಗರಕಟ್ಟೆಯಲ್ಲೂ ವಿಶೇಷ ಪೂಜೆ ನಡೆಯಿತು. ವಿಶೇಷವಾಗಿ ಮಹಿಳೆಯರು ಆಗಮಿಸಿ ತನಿ ಎರೆದು, ಎಳನೀರು ಅಭಿಷೇಕ,ವಿವಿಧ ಜಾತಿಯ ಉಂಡೆಗಳನ್ನು ನೈವೇದ್ಯ ಮಾಡಿದರು. ನಾಗನಿಗೆ ಅರಸಿನದ ಅಲಂಕಾರ ಜೋರಾಗಿತ್ತು.
ಗ್ರಾಮೀಣ ಪ್ರದೇಶದಲ್ಲಿ ನಾಗರಕಟ್ಟೆ, ಅಶ್ವತ್ತ ಕಟ್ಟೆಗಳಲ್ಲೂ ಸಹ ನಾಗನಿಗೆ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು ಆಗಮಿಸಿ ಹಣ್ಣು ಕಾಯಿ ಮಾಡಿಸಿ ವಿಶೇಷ ಪೂಜೆ ಮಾಡಿದರು.ಬಾಳೆಹೊನ್ನೂರಲ್ಲಿ ಸಂಭ್ರಮದ ನಾಗರ ಪಂಚಮಿಬಾಳೆಹೊನ್ನೂರು: ಹೋಬಳಿಯಾದ್ಯಂತ ಶ್ರಾವಣ ಮಾಸದ ಮೊದಲ ಹಾಗೂ ಅಣ್ಣ ತಂಗಿಯರ ಹಬ್ಬ ನಾಗರ ಪಂಚಮಿಯನ್ನು ಮಂಗಳವಾರ ಶ್ರದ್ಧಾ. ಭಕ್ತಿಯಿಂದ ಆಚರಿಸಲಾಯಿತು.ಪಂಚಮಿ ಅಂಗವಾಗಿ ನಾರಿಯರು ನಾಗ ಬನಕ್ಕೆ ತೆರಳಿ ತನಿ ಎರೆದು, ಅರಶಿನ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಸುತ್ತಮುತ್ತಲಿನ ಎಲ್ಲಾ ದೇವಾಲಯಗಳ ನಾಗರ ಕಟ್ಟೆಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದರು.ನಾಗಬನದ ನಾಗರ ಕಲ್ಲಿಗೆ ವಿಶೇಷ ಅಭಿಷೇಕ, ಪೂಜೆಗಳು ವಿಜೃಂಭಣೆಯಿಂದ ನಡೆದವು. ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್‌ಭಟ್ ನೇತೃತ್ವದಲ್ಲಿ ಅರ್ಚಕರು ನಾಗದೇವರಿಗೆ ಪಂಚಾಮೃತಾಭಿಷೇಕ, ಪುಷ್ಪಾಲಂಕಾರ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು.ಪಟ್ಟಣದ ಬಂಡಿಮಠ ಬಾಲಸುಬ್ರಹ್ಮಣ್ಯ ದೇವಸ್ಥಾನ, ಗಣಪತಿ ದೇವಸ್ಥಾನ, ಮಸೀದಿಕೆರೆ ನಾಗರಕಟ್ಟೆ, ರಂಭಾಪುರಿ ಪೀಠ, ರೇಣುಕಾನಗರದ ಗಣಪತಿ ದೇವಸ್ಥಾನ, ಅಕ್ಷರನಗರ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇಗುಲದ ನಾಗಬನದಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು ನಡೆದವು.