ಕಾರವಾರ: ತಾಲೂಕು ಸೇರಿದಂತೆ ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬವನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಇಲ್ಲಿನ ನಂದನಗದ್ದಾದಲ್ಲಿನ ನಾಗನಾಥ ದೇವಸ್ಥಾನದಲ್ಲಿ ಶ್ರೀದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನ ಪಡೆದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಕುಂಭೇಶ್ವರ ದೇವರು, ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ಅಮ್ಮನವರು, ಕಡ್ಲೆಯ ನಾಗಬನ, ಅಂತ್ರವಳ್ಳಿಯ ಸದಾಶಿವ ದೇವಾಲಯ ಸೇರಿದಂತೆ ಬಾಡ, ಮೂರೂರು, ಹೆಗಡೆ, ಮಿರ್ಜಾನ, ಸಂತೆಗುಳಿ ಮುಂತಾದ ಎಲ್ಲೆಡೆ ಪ್ರತಿಷ್ಠಾಪಿತ ನಾಗರ ಕಟ್ಟೆ, ಗುತ್ತು, ಗುಡಿಗಳಲ್ಲಿ ನಾಗಪಂಚಮಿ ಪ್ರಯುಕ್ತ ಹಾಲು, ಎಳನೀರು, ಪಂಚಾಮೃತಾಭಿಷೇಕ ಮಾಡಿದರು. ನಾಗದೇವತೆಗೆ ಪ್ರಿಯವಾದ ಅಡಕೆ ಮರದ ಸಿಂಗಾರ, ತೆಂಗಿನ ಗರಿಗಳ ಸಾಂಪ್ರದಾಯಿಕ ಅಲಂಕಾರದೊಂದಿಗೆ ಹೂವು- ಹಣ್ಣು, ಫಲತಾಂಬೂಲ, ನೈವೇದ್ಯದೊಂದಿಗೆ ಪೂಜಿಸಲಾಯಿತು. ಮಹಿಳೆಯರು ಮಕ್ಕಳಾದಿಯಾಗಿ ವಿಶೇಷ ಹರಕೆ ಸೇವೆಯ ಜತೆಗೆ ಸಾರ್ವಜನಿಕರು ಸಾಯಂಕಾಲದವರೆಗೂ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.ಪೌರಾಣಿಕ ಮಹತ್ವವುಳ್ಳ ನಾಗಕ್ಷೇತ್ರವಾದ ಧಾರೇಶ್ವರದ ನಾಗತೀರ್ಥದಲ್ಲಿ ಬೆಳಗಿನ ಜಾವದಿಂದಲೇ ನಾಗರ ಪೂಜೆ ನಡೆದಿದೆ. ತಾಲೂಕಿನ ಎಲ್ಲೆಡೆಯಿಂದ ಭಕ್ತಾದಿಗಳು ಬಂದಿದ್ದರು. ರಾಷ್ಟ್ರೀಯ ಹೆದ್ದಾರಿಯಂಚಿನ ಪ್ರಮುಖ ನಾಗಸನ್ನಿಧಿಯಾಗಿರುವುದರಿಂದ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಕೂಡಾ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.