ಗಣಿಜಿಲ್ಲೆ ಬಳ್ಳಾರಿಯಲ್ಲಿ ಸಡಗರದ ನಾಗರಪಂಚಮಿ

KannadaprabhaNewsNetwork |  
Published : Jul 30, 2025, 12:46 AM IST
ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನ ಆವರಣದಲ್ಲಿನ ಕಲ್ಲಿನ ನಾಗಶಿಲೆಗಳಿಗೆ ಮಹಿಳೆಯರು ಹಾಲೆರೆದು ಭಕ್ತಿ ಸಮರ್ಪಿಸಿದರು.  | Kannada Prabha

ಸಾರಾಂಶ

ಇಡೀ ವರ್ಷದ ವಿವಿಧ ಹಿಂದೂ ಹಬ್ಬಗಳಿಗೆ ಮುನ್ನುಡಿ ಬರೆಯುವ, ಶ್ರಾವಣದ ಮೊದಲ ಹಬ್ಬ ಎನಿಸಿದ ನಾಗರ ಪಂಚಮಿ (ನಾಗಚೌತಿ) ಸಡಗರ ಮೈದಳೆದಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇಡೀ ವರ್ಷದ ವಿವಿಧ ಹಿಂದೂ ಹಬ್ಬಗಳಿಗೆ ಮುನ್ನುಡಿ ಬರೆಯುವ, ಶ್ರಾವಣದ ಮೊದಲ ಹಬ್ಬ ಎನಿಸಿದ ನಾಗರ ಪಂಚಮಿ (ನಾಗಚೌತಿ) ಸಡಗರ ಮೈದಳೆದಿದೆ. ಜಿಲ್ಲೆಯಾದ್ಯಂತ ನಾಗಪೂಜೆಗಳು ಶ್ರದ್ಧಾಭಕ್ತಿಯಿಂದ ಆಚರಣೆಗೊಳ್ಳುತ್ತಿದ್ದು ಮಹಿಳೆಯರು ಹಾಗೂ ಮಕ್ಕಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.

ಹೀಗಾಗಿ ಗಣಿಜಿಲ್ಲೆಯಾದ್ಯಂತ ಎರಡು ದಿನಗಳ ನಾಗಚೌತಿಯ ಹರ್ಷೋಲ್ಲಾಸ ಕಂಡು ಬಂದಿದೆ.

ಹಬ್ಬದ ಹಿನ್ನೆಲೆ ಮಣ್ಣಿನಿಂದ ತಯಾರಿಸಿದ ನಾಗರಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಿ, ಹಾಲೆರೆಯುವ ಮೂಲಕ ಕುಟುಂಬಕ್ಕೆ ಒಳಿತು ಮಾಡು ಎಂದು ನಾಗದೇವತೆಯನ್ನು ಪ್ರಾರ್ಥಿಸುವುದು ಪ್ರತೀತಿ. ಹೀಗಾಗಿ ಕೆಲವರು ಕುಂಬಾರರು ಹುತ್ತಿನ ಮಣ್ಣಿನಿಂದ ತಯಾರಿಸಿದ ನಾಗದೇವತೆಯನ್ನು ತಂದು ಪೂಜಿಸಿದರೆ, ಕೆಲವರು ತಾವೇ ಮನೆಯಲ್ಲಿಯೇ ಮಣ್ಣಿನ ನಾಗಮೂರ್ತಿಯನ್ನು ತಯಾರಿಸಿಕೊಂಡು ಪೂಜಾ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು.

ಇದಕ್ಕೂ ಮುನ್ನ ವಿವಿಧ ದೇವಸ್ಥಾನಗಳ ಆವರಣದಲ್ಲಿರುವ ಕಲ್ಲಿನ ನಾಗಶಿಲೆಗಳಿಗೆ ಹಾಲೆರೆದು ಮಹಿಳೆಯರು ಭಕ್ತಿ ಸಮರ್ಪಿಸಿದರು. ಬೆಳಗಿನ ಜಾವದಿಂದಲೇ ನಾಗಶಿಲೆಗಳಿಗೆ ಪೂಜೆ ಸಲ್ಲಿಸಿ, ಹಾಲೆರೆಯುವ ದೃಶ್ಯಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದವು. ಮನೆಯ ಸದಸ್ಯರೆಲ್ಲರೂ ಜೊತೆಗೂಡಿ ಮಣ್ಣಿನ ನಾಗರ ಮೂರ್ತಿಗೆ ಹಾಲೆರೆದು ನಾಗದೇವತೆಗೆ ನಮಿಸಿದರು.

ನಾಗರ ಪಂಚಮಿಗಾಗಿ ಶೇಂಗಾ ಉಂಡಿ, ಎಳ್ಳು, ಪುಟಾಣಿ ಹಿಟ್ಟು, ರವಾ, ಅಂಟಿನ ಉಂಡಿ, ಗಾರಿಗೆ, ಮಾದ್ಲಿ, ಖರ್ಜಿಕಾಯಿ, ಮತ್ತಿತರ ಸಿಹಿ ಖಾದ್ಯಗಳನ್ನು ತಯಾರಿಸಿ, ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ನೀಡುವುದು ಈ ಹಬ್ಬದ ಮತ್ತೊಂದು ವಿಶೇಷವಾಗಿದ್ದು ಮಹಿಳೆಯರು ಕಳೆದ ಐದಾರು ದಿನಗಳಿಂದಲೂ ಉಂಡಿ ತಯಾರಿಕೆಯಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರು. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ನಾಗರಪಂಚಮಿಯ ಸಡಗರ ಹೆಚ್ಚಾಗಿ ಕಂಡು ಬಂತು. ಹಬ್ಬದ ಪೂಜಾ ಸಾಮಗ್ರಿಗಳು ಹಾಗೂ ವಿವಿಧ ಫಲ-ಪುಷ್ಪಗಳು, ಕುಂಬಾರ ಓಣಿಯಲ್ಲಿ ಮಣ್ಣಿನ ನಾಗಮೂರ್ತಿಯನ್ನು ಖರೀದಿಸುವ ಪ್ರಕ್ರಿಯೆ ಕಳೆದ ನಾಲ್ಕೈದು ದಿನಗಳಿಂದ ಜೋರಾಗಿತ್ತು.

ನಾಗರ ಪಂಚಮಿಯು ಕುಟುಂಬದ ಒಳಿತು ಹಾಗೂ ಶಾಂತಿಗಾಗಿ ಆಚರಿಸುವ ಒಂದು ಪವಿತ್ರ ಹಬ್ಬವಾಗಿದ್ದು, ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಹೆಚ್ಚು ಆಚರಣೆಯಲ್ಲಿದೆ. ಈ ಹಿಂದೆ ನಾಗರ ಪಂಚಮಿ ಹಬ್ಬದಲ್ಲಿ ಜೋಕಾಲಿಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಜೀಕಿ ಸಂಭ್ರಮಿಸುತ್ತಿದ್ದರು. ಆಧುನಿಕತೆಯ ಭರಾಟೆಯಲ್ಲಿ ಹಳ್ಳಿಗಳಲ್ಲಿಯೂ ಜೋಕಾಲಿ ಮರೆಯಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ