ಸಂಪ್ರದಾಯಕ್ಕೆ ಸೀಮಿತಗೊಂಡ ನಾಗರ ಪಂಚಮಿ ಹಬ್ಬ

KannadaprabhaNewsNetwork |  
Published : Aug 18, 2026, 02:45 AM IST
ಪೋಟೊ16ಕೆಎಸಟಿ3ಕುಷ್ಟಗಿ ಪಟ್ಟಣದ ಭಾಗ್ಯದ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ನಾಗರಕಟ್ಟೆಗೆ ಹಾಲೆರೆಯುತ್ತಿರುವದು. ಪೋಟೊ16ಕೆಎಸಟಿ3ಎಯುವತಿಯರು ಜೋಕಾಲಿ ಆಡುತ್ತಿರುವ ದೃಶ್ಯ (ಸಂಗ್ರಹ ಚಿತ್ರ)  | Kannada Prabha

ಸಾರಾಂಶ

ಆಧುನಿಕ ಜೀವನಶೈಲಿ, ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಗ್ರಾಮೀಣ ಯುವಜನರು ಪಟ್ಟಣ–ನಗರಗಳತ್ತ ವಲಸೆ ಹೋಗುತ್ತಿರುವುದು ಹಬ್ಬದ ಸಾಂಪ್ರದಾಯಿಕ ಸಂಭ್ರಮಕ್ಕೆ ಹೊಡೆತ ನೀಡಿದೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ನಾಗರ ಪಂಚಮಿ ಕೆಲ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಸಡಗರ–ಸಂಭ್ರಮದ ಹಬ್ಬವಾಗಿತ್ತು. ಹಬ್ಬದ ದಿನ ನಾಗದೇವತೆಗೆ ಪೂಜೆ ಸಲ್ಲಿಸುವುದರ ಜತೆಗೆ ಜೋಕಾಲಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟೋಟಗಳು ನಡೆಯುತ್ತಿದ್ದವು. ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದರು. ಆದರೆ ಕಾಲ ಬದಲಾಗುತ್ತಿದ್ದಂತೆ ನಾಗರ ಪಂಚಮಿ ಸಂಪ್ರದಾಯದ ಆಚರಣೆಗೆ ಸೀಮಿತವಾಗುತ್ತಿರುವುದು ಕಂಡುಬರುತ್ತಿದೆ.

ಆಧುನಿಕ ಜೀವನಶೈಲಿ, ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಗ್ರಾಮೀಣ ಯುವಜನರು ಪಟ್ಟಣ–ನಗರಗಳತ್ತ ವಲಸೆ ಹೋಗುತ್ತಿರುವುದು ಹಬ್ಬದ ಸಾಂಪ್ರದಾಯಿಕ ಸಂಭ್ರಮಕ್ಕೆ ಹೊಡೆತ ನೀಡಿದೆ. ಹಿಂದೆ ಹಬ್ಬದ ದಿನ ಗ್ರಾಮದ ಬೀದಿಗಳಲ್ಲಿ ಕಂಡುಬರುತ್ತಿದ್ದ ಮಕ್ಕಳ ಓಡಾಟ, ಯುವಕರ ಆಟೋಟ ಹಾಗೂ ಮಹಿಳೆಯರ ಸಂಭ್ರಮ ಈಗ ಅಪರೂಪವಾಗುತ್ತಿದೆ.

ಜೋಕಾಲಿ, ಆಟಗಳು ಮಾಯ: ನಾಗರ ಪಂಚಮಿ ಎಂದಾಕ್ಷಣ ಗ್ರಾಮೀಣ ಪ್ರದೇಶಗಳಲ್ಲಿ ಜೋಕಾಲಿ ಹಾಕುವುದು ಪ್ರಮುಖ ಆಕರ್ಷಣೆಯಾಗಿತ್ತು. ಮರಗಳಿಗೆ ದೊಡ್ಡ ಜೋಕಾಲಿ ಕಟ್ಟಿ ಮಕ್ಕಳು, ಯುವತಿಯರು ಹಾಗೂ ಮಹಿಳೆಯರು ಉತ್ಸಾಹದಿಂದ ಜೋಕಾಲಿ ಆಡುವ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಹಗ್ಗಜಗ್ಗಾಟ, ಕಬಡ್ಡಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಯುವಕರಿಗೆ ಈ ಸ್ಪರ್ಧೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿದ್ದವು. ಆದರೆ ಇದೀಗ ಸಾಂಪ್ರದಾಯಿಕ ಆಟೋಟ ಬಹುತೇಕ ಗ್ರಾಮಗಳಲ್ಲಿ ಕಣ್ಮರೆಯಾಗಿವೆ.

ಹಬ್ಬದ ಸಂಭ್ರಮ ಕಡಿಮೆಯಾಗಿದ್ದರೂ ನಾಗದೇವತೆಗೆ ಪೂಜೆ ಸಲ್ಲಿಸುವ ಸಂಪ್ರದಾಯ ಮಾತ್ರ ಬಹುತೇಕ ಕಡೆ ಮುಂದುವರಿದಿದೆ. ಮನೆಗಳಲ್ಲಿ ನಾಗದೇವರ ಚಿತ್ರ ಅಥವಾ ಮೂರ್ತಿಗೆ ಪೂಜೆ, ಹಾಲು–ನೈವೇದ್ಯ ಅರ್ಪಣೆ, ಹುತ್ತಗಳಿಗೆ ಪೂಜೆ ಸಲ್ಲಿಸುವ ಆಚರಣೆಗಳು ನಡೆಯುತ್ತಿವೆ.

ಕೃಷಿಯನ್ನೇ ಅವಲಂಬಿಸಿರುವ ಗ್ರಾಮೀಣ ಕುಟುಂಬಗಳಿಗೆ ಬರ ಪರಿಸ್ಥಿತಿ ದೊಡ್ಡ ಹೊಡೆತ ನೀಡಿದೆ. ಬೆಳೆ ಹಾನಿ, ಆದಾಯ ಕುಸಿತ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದೆ. ಹೀಗಾಗಿ ಹಬ್ಬದ ಆಚರಣೆಯಲ್ಲಿ ಸರಳತೆ ಕಂಡುಬರುತ್ತಿದ್ದು ಹಬ್ಬದ ಮೂಲ ಆಶಯ ಹಾಗೂ ಧಾರ್ಮಿಕ ಆಚರಣೆ ಉಳಿಸಿಕೊಂಡು ಅನಗತ್ಯ ಖರ್ಚು ಕಡಿಮೆ ಮಾಡಿ ನಾಗರ ಪಂಚಮಿ ಆಚರಿಸುವತ್ತ ಗ್ರಾಮಸ್ಥರು ಮುಂದಾಗಿದ್ದಾರೆ.

ನಾಗರ ಪಂಚಮಿ ಕೇವಲ ಪೂಜೆ–ಪುನಸ್ಕಾರದ ಹಬ್ಬವಲ್ಲ. ಇದು ಗ್ರಾಮೀಣ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿ ಮತ್ತು ಜನಪದ ಪರಂಪರೆಯ ಪ್ರತೀಕ. ಆಧುನಿಕತೆಯ ನಡುವೆ ಆಚರಣೆಯ ಸ್ವರೂಪ ಬದಲಾಗಬಹುದು. ಆದರೆ ಹಬ್ಬದ ಹಿಂದಿರುವ ಒಗ್ಗಟ್ಟು, ಸಂಪ್ರದಾಯ ಮತ್ತು ಸಂಸ್ಕೃತಿಯ ಬೇರು ಕಳೆದುಹೋಗದಂತೆ ನೋಡಿಕೊಳ್ಳುವುದು ಇಂದಿನ ಪೀಳಿಗೆಯ ಜವಾಬ್ದಾರಿ ಎಂದು ಕುಷ್ಟಗಿ ಗೃಹಿಣಿ ಶಾರದಾ ಶೆಟ್ಟರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೀಡಿಯೋ: ಪೊಲೀಸ್ ದೂರು
ಸುಂಟಿಕೊಪ್ಪ: ಕಾಡಾನೆ ಹಾವಳಿ, ಬೆಳೆ ನಷ್ಟ