ನಾಗರಹೊಳೆ ರಕ್ಷಣೆಗೆ ಜೀವ ಮುಡಿಪಾಗಿಟ್ಟಿದ್ದ ಕೆ.ಎಂ. ಚಿಣ್ಣಪ್ಪ ಇನ್ನಿಲ್ಲ

KannadaprabhaNewsNetwork | Updated : Feb 27 2024, 09:51 AM IST

ಸಾರಾಂಶ

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಕಾಡುರಕ್ಷಕ ಚಿಣ್ಣಪ್ಪ ಅಸುನೀಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿವೃತ್ತ ಅರಣ್ಯಾಧಿಕಾರಿ ಹಾಗೂ ಪರಿಸರ ಪ್ರೇಮಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಸರ ಪ್ರಶಸ್ತಿ ಪಡೆದ ಕೊಟ್ರಂಗಡ ಎಂ. ಚಿಣ್ಣಪ್ಪ(84) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. 

ನಾಗರಹೊಳೆ ಸೇರಿ ಭಾರತದ ಕಾಡುಗಳ ಬಗ್ಗೆ ಚಿಣ್ಣಪ್ಪ ಅಪೂರ್ವ ಮಾಹಿತಿ ಹೊಂದಿದ್ದರು. ಅರಣ್ಯ ವಿಚಾರದಲ್ಲಿ ನಡೆದಾಡುವ ಕೋಶದಂತೆ ಜೀವಿಸಿದ್ದರು.

ಮಂಗಳವಾರ ಪೊನ್ನಂಪೇಟೆ ತಾಲೂಕಿನ ಕಾಕೂರು ಗ್ರಾಮದ ಸ್ವಗೃಹದಲ್ಲಿ ಚಿಣ್ಣಪ್ಪ ಅಂತ್ಯಕ್ರಿಯೆ ನೆರವೇರಲಿದೆ. ಮೃತರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಕಾಡಿನ ಸಂರಕ್ಷಣೆಗಾಗಿ ಇವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಸೇರಿ ಅನೇಕ ಪ್ರಶಸ್ತಿಗಳು ಸಂದಿದ್ದವು. 

ನಾಗರಹೊಳೆ ಅರಣ್ಯಾಧಿಕಾರಿಯಾಗಿ ಚಿಣ್ಣಪ್ಪ ಕರ್ತವ್ಯ ಸ್ಮರಣೀಯ. ಕೆಲ ವರ್ಷಗಳ ಹಿಂದೆ ದುಷ್ಕರ್ಮಿಗಳು ನಾಗರಹೊಳೆಗೆ ಬೆಂಕಿಯಿಟ್ಟಿದ್ದಾಗ ಚಿಣ್ಣಪ್ಪ ಕಾಡು ರಕ್ಷಣೆಗೆ ಜೀವಪಣವಾಗಿಟ್ಟು ಹೋರಾಡಿದ್ದರು.

1941ರಲ್ಲಿ ದಕ್ಷಿಣ ಕೊಡಗಿನ ಕುಮಟೂರು ಗ್ರಾಮದಲ್ಲಿ ಸಶಸ್ತ್ರ ಪಡೆಗಳ ಕುಟುಂಬದಲ್ಲಿ ಜನಿಸಿದ ಚಿಣ್ಣಪ್ಪ ಅವರು ಅತ್ಯುನ್ನತ ವನ್ಯಜೀವಿ ರಕ್ಷಕರಾಗಿದ್ದರು. 1967ರಲ್ಲಿ ಕರ್ನಾಟಕ ಅರಣ್ಯ ಇಲಾಖೆಗೆ ಅರಣ್ಯಾಧಿಕಾರಿಯಾಗಿ ಸೇರಿದ ಅವರು ವೃತ್ತಿಜೀವನದ ಬಹುಪಾಲು ನಾಗರಹೊಳೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿದ್ದರು. 

ಇವರ ಸೇವೆ ಪರಿಗಣಿಸಿದ ಸರ್ಕಾರ 1985ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಿತ್ತು. ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷರಾಗಿ ಅರಣ್ಯಕ್ಕೆ ಸಂಬಂಧಿಸಿದ ಹಲವು ಜಾಗೃತಿ ಕಾರ್ಯಕ್ರಮವನ್ನು ಮಕ್ಕಳನ್ನು ಸೇರಿಸಿಕೊಂಡು ಚಿಣ್ಣಪ್ಪ ಹಮ್ಮಿಕೊಂಡಿದ್ದರು. 

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಿತರಾಗಿ ತರಬೇತಿ ಮೂಲಕ ಕಾಡಿನ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿದ್ದರು.

Share this article