ಕನ್ನಡಪ್ರಭ ವಾರ್ತೆ ಖಾನಾಪುರ
ವಿದ್ಯಾರ್ಥಿಗಳು ಇಂದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿ ಸಾಧಿಸಬೇಕು. ಪಠ್ಯದ ಜೊತೆ ದಿನಪತ್ರಿಕೆಗಳು, ನಿಯತಕಾಲಿಕಗಳನ್ನು ಓದಿ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಕರೆ ನೀಡಿದರು.ಪಟ್ಟಣದ ಮರಾಠಾ ಮಂಡಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡಾಜ್ಯೋತಿ ಪ್ರಜ್ವಲಿಸಿ ಮಾತನಾಡಿದ ಶಾಲೆಯ ಮಾಜಿ ವಿದ್ಯಾರ್ಥಿ ಹಾಗೂ ಶಿರಸಿ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ತಮ್ಮ ಇಂದಿನ ಸ್ಥಾನಮಾನಕ್ಕೆ ಶಾಲೆಯ ಗುರುಗಳು ನೀಡಿದ ಮಾರ್ಗದರ್ಶನ ಕಾರಣ. ಹೀಗಾಗಿ ಪ್ರತಿ ಶಿಷ್ಯಂದಿರೂ ಗುರುಗಳು ಹೆಮ್ಮೆಪಡುವ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ಮರಾಠಾ ಮಂಡಳ ಪಿಯು ಕಾಲೇಜಿನ ಪ್ರಾಂಶುಪಾಲ ಅರವಿಂದ ಪಾಟೀಲ ಉಪನ್ಯಾಸ ನೀಡಿ ಶಿವಾಜಿ ಮಹಾರಾಜರು ಹಿಂದು ಸ್ವರಾಜ್ಯ ಸ್ಥಾಪಿಸಲು ಮಾಡಿದ ಹೋರಾಟದ ಬಗ್ಗೆ ವಿವರಿಸಿ ಸಾಧಕರಿಗೆ ಗುರಿ ಸಾಧಿಸುವ ಛಲ ಇರಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ನಾಗರಾಜ ಯಾದವ, ಶಿವಾನಂದ ನಿಂಗಾಣಿ, ಪತ್ರಕರ್ತ ಸುಹಾಸ ಪಾಟೀಲ, ಪ್ರಸನ್ನ ಕುಲಕರ್ಣಿ ಅವರನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳು ಪಥ ಸಂಚಲನ ಮತ್ತು ಕವಾಯತು ಪ್ರದರ್ಶಿಸಿದರು.
ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರಾಠಾ ಮಂಡಳ ಸಂಸ್ಥೆಯ ನಿರ್ದೇಶಕ ಪರಶುರಾಮ ಗುರವ, ಶಿವಾಜಿ ಪಾಟೀಲ, ಶಿಕ್ಷಕ ಸಿ.ಕೆ ಗೋಮನಾಚೆ, ಎಸ್.ಬಿ ಭಾತಕಾಂಡೆ, ಸಾಗರ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಟಿ.ಆರ್ ಪತ್ರಿ ಸ್ವಾಗತಿಸಿದರು. ವೈ.ಎಫ್ ನಿಲಜಕರ ಕಾರ್ಯಕ್ರಮ ನಿರ್ವಹಿಸಿದರು. ಆರ್.ಟಿ ಟಕ್ಕೇಕರ ವಂದಿಸಿದರು.