ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ರಮೇಶ್ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ಬಳಿಕ ಮಹಾಮಂಗಳಾರತಿ, ವಿವಿಧ ವೈದಿಕ ವಿದಿವಿಧಾನಗಳನ್ನು ನೆರವೇರಿಸಿ ಪ್ರಸಾದ ನೀಡಿದರು.
ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತರು ನಾಗರಾಜನಿಗೆ ತನು ಎರೆದು ಕೃತಾರ್ಥರಾದರು. ಭಕ್ತಾದಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ಪುರೋಹಿತ ಕುಮಾರ ಭಟ್ ನಾಗದೇವರಿಗೆ ಅರ್ಪಿಸಿದರು. ತನುವಿನೊಂದಿಗೆ ಹಿಂಗಾರ, ಹಣ್ಣುಕಾಯಿ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ಸಾಗಿ ಬಂದು ಭಕ್ತರು ಹಾಲು ಮತ್ತು ಎಳನೀರು ಸಮರ್ಪಿಸಿದರು.ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಜುರಾಜ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಅತ್ಯಧಿಕ ಸಂಖ್ಯೆಯಲ್ಲಿ ಊರ ಭಕ್ತರು ಬೆಳಗ್ಗೆಯಿಂದಲೇ ತನು ಅರ್ಪಿಸಿ ಸೇವೆಯನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ದೇವಳದ ಹೊರಾಂಗಣದಲ್ಲಿ ಮಾರುದ್ದದ ಸರತಿ ಸಾಲಿನ ಮೂಲಕ ತೆರಳಿ ತನು ಸಮರ್ಪಿಸಿದರು. ನಾಗನಿಗೆ ಶುದ್ಧ ಆಕಳ ಹಾಲನ್ನು ಸಮರ್ಪಿಸುವುದು ವಾಡಿಕೆಯಾದುದರಿಂದ ಇಂದು ಹಸುವಿನ ಹಾಲಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು. ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಲ್ಲಿನ ಪರಿಸರದಲ್ಲಿನ ಹಾಲಿನ ಡೈರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಲನ್ನು ಪಡೆದರು. ಇದನ್ನು ಮನಗಂಡ ಸ್ಥಳೀಯ ಹೈನುಗಾರರು ಹಸುವಿನ ಹಾಲನ್ನು ನೀಡಿದರು. ಅಲ್ಲದೆ ಊರವರು ದೂರದೂರಿನ ಹಾಲಿನ ಡೈರಿಗಳಿಂದ ಹಾಲನ್ನು ತರಿಸಿ ಭಕ್ತರಿಗೆ ವಿತರಿಸಿದರು. ಹೆಚ್ಚಿನ ಭಕ್ತಾದಿಗಳು ಇದರ ಉಪಯೋಗವನ್ನು ಪಡೆದುಕೊಂಡರು. ಈ ರೀತಿಯ ವ್ಯವಸ್ಥೆಯಿಂದಾಗಿ ಪರವೂರ ಭಕ್ತರಿಗೆ ಹೆಚ್ಚು ಅನುಕೂಲವಾಯಿತು.