ಉದ್ಯಾನ ಜಾಗ ಉಳಿಸಲು ನಾಗರತವಹಳ್ಳಿ ಗ್ರಾಮಸ್ಥರ ಧರಣಿ

KannadaprabhaNewsNetwork |  
Published : Feb 14, 2024, 02:18 AM IST
13ಎಚ್ಎಸ್ಎನ್17 : ಪಾರ್ಕ್ ಗಾಜವನ್ನು ಉಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಹಾಸನ ಜಿಲ್ಲೆಯ ಗ್ರಾಮದ ಸರ್ವೆ ನಂಬರ್ 54 ರಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ನಾಗರತವಳ್ಳಿ ಗ್ರಾಮಸ್ಥರು ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.

ಪಾರ್ಕ್‌ಗೆ ಮೀಸಲಿಟ್ಟಿದ್ದ ಸ್ಥಳವನ್ನು ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಮಂಜೂರು ಆರೋಪ । ಪರಿಹಾರಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮದ ಸರ್ವೆ ನಂಬರ್ 54 ರಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ನಾಗರತವಳ್ಳಿ ಗ್ರಾಮಸ್ಥರು ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.

ಗ್ರಾಮದ ಸರ್ವೆ ನಂಬರ್ 54 ರಲ್ಲಿ ಪಾರ್ಕ್‌ಗಾಗಿ ಮೀಸಲಿಟ್ಟಿದ್ದ ಜಾಗವನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು ಅತಿಕ್ರಮ ಪ್ರವೇಶ ಮಾಡಿ ಗ್ರಾಮದ ಅನುಕೂಲಕ್ಕಾಗಿ ಇರುವ ಒಂದಿಷ್ಟು ಜಾಗವನ್ನು ಲಪಟಾಯಿಸಲು ಹುನ್ನಾರ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಸುನಿಲ್ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಉಳಿಸಿಕೊಳ್ಳಲು ಕಳೆದ ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ. ಈವರೆಗೂ ಯಾವುದೇ ಅಧಿಕಾರಿಗಳು ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದಿಲ್ಲ ಎಂದು ದೂರಿದರು.

ಪಹಣಿಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗ ಎಂದು ನಮೂದಾಗಿದ್ದರೂ ಕೆಲ ಖಾಸಗಿ ವ್ಯಕ್ತಿಗಳು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಖಾಸಗಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದರು. ಅದನ್ನು ತಡೆದು ಸ್ಥಳದಲ್ಲೇ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದರು.

‘ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದ್ದು ಈವರೆಗೆ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗಿಲ್ಲ. ನಾವು ಯಾವುದೇ ಕಾರಣಕ್ಕೂ ಜಾಗವನ್ನು ಬಿಟ್ಟು ಕೂಡುವುದಿಲ್ಲ. ಉದ್ಯಾನ ಜಾಗ ಉದ್ಯಾನಕ್ಕೇ ಉಳಿಯಬೇಕು. ಈ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದೇವೆ’ ಎಂದರು.

‘ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಇದು ಉದ್ಯಾನದ ಜಾಗ ಎಂದು ನಾಮಫಲಕ ಅಳವಡಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ. ಖಾಸಗಿಯವರು ಕಾಮಗಾರಿ ಮಾಡುವ ಉದ್ದೇಶದಿಂದ ಕೆಲ ಯಂತ್ರೋಪಕರಣಗಳನ್ನು ತಂದು ಇಲ್ಲಿ ಬಿಟ್ಟು ಹೋಗಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆ’ ಎಂದು ಎಚ್ಚರಿಸಿದರು.

ಗ್ರಾಮದ ರೇಣುಕಮ್ಮ ಮಾತನಾಡಿ, ಸುತ್ತಮುತ್ತಲ ಹತ್ತಾರು ಹಳ್ಳಿಗಳ ಅನುಕೂಲಕ್ಕೆ ಆಧಾರವಾಗಿರುವ ಜಾಗವನ್ನು ಅಧಿಕಾರಿಗಳು ಹಣ ಪಡೆದು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಮುಂದಾಗಿರುವುದು ಖಂಡನೀಯ. ಖಾಸಗಿ ವ್ಯಕ್ತಿಗಳು ಗ್ರಾಮದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಗ್ರಾಮಸ್ಥರಿಗೆ ಬೆದರಿಕೆ ಹಾಕುವ, ಹಲ್ಲೆ ಮಾಡುವ ಪ್ರಕರಣಗಳು ನಡೆದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

ಈ ಎಲ್ಲಾ ಸಮಸ್ಯೆಗಳಿಗೂ ಕೆಐಎಡಿಬಿ ಇಲಾಖೆಯಲ್ಲಿ ಅನೇಕ ದಿನಗಳಿಂದ ಅಧಿಕಾರಿಗಳು ಠಿಕಾಣಿ ಹೂಡಿರುವುದೇ ಕಾರಣ, ಕೂಡಲೇ ಅನೇಕ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಗ್ರಾಮದ ಜನರಿಗೆ ಆಧಾರವಾಗಿರುವ ಈ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕಾಗಿ ಉಳಿಸಿಕೊಡಬೇಕು. ಅಲ್ಲಿಯವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದರು.

ಗ್ರಾಮಸ್ಥರಾದ ಪುಟ್ಟರಾಜು, ಪರಮೇಶ್, ದರ್ಶನ್, ರವಿ, ಸ್ವಾಮಿ, ಅಯ್ಯಪ್ಪ, ಮೋಹನ್, ಸುಮಂತ್, ರೋಹಿತ್, ಶಿವ, ಸಣ್ಣಮ್ಮ, ಸರೋಜಮ್ಮ, ಮಂಜುನಾಥ್, ರತ್ನಮ್ಮ, ಗಿಡ್ಡಮ್ಮ, ಅಶ್ವಿನಿ, ಪಾಪಮ್ಮ, ಸಣ್ಣಮ್ಮ, ಕಮಲಕ್ಕ ಇದ್ದರು.ಉದ್ಯಾನ ಸ್ಥಳವನ್ನು ಉಳಿಸಲು ಆಗ್ರಹಿಸಿ ನಾಗರತವಳ್ಳಿ ಗ್ರಾಮಸ್ಥರು ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!