ನಾಗಶೆಟ್ಟಿಕೊಪ್ಪ ಕೆರೆ ನವೀಕರಣ: ಶಾಸಕರಿಂದ ಪರಿಶೀಲನೆ

KannadaprabhaNewsNetwork |  
Published : Feb 19, 2025, 12:51 AM IST
ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕೆರೆ ನವೀಕರಣ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಕೆರೆ ನವೀಕರಣ ಕಾಮಗಾರಿ, ಸ್ಥಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ, ಸಮರ್ಪಕವಾದ ಒಳಚರಂಡಿ

ಹುಬ್ಬಳ್ಳಿ: ಇಲ್ಲಿನ ನಾಗಶೆಟ್ಟಿಕೊಪ್ಪದ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕೆರೆ ನವೀಕರಣ ಕಾಮಗಾರಿ ಸ್ಥಳಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ನಗರಾಭಿವೃದ್ಧಿ ಇಲಾಖೆಯಿಂದ ₹2.50 ಕೋಟಿ ವೆಚ್ಚದಲ್ಲಿ ಕೆರೆ ನವೀಕರಣ ಕಾಮಗಾರಿ ಆರಂಭಿಸಿ 4 ವರ್ಷ ಕಳೆದರೂ ಶೇ. 10ರಷ್ಟು ಕಾಮಗಾರಿಯಾಗಿಲ್ಲ. ಆದರೆ, ಹಣ ಮಾತ್ರ ಖರ್ಚಾಗಿದೆ. ಕಾಮಗಾರಿ ಕೈಗೊಂಡಿರುವ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅವೈಜ್ಞಾನಿಕವಾಗಿ ಸಿದ್ಧಪಡಿಸಿದ ಡಿಪಿಆರ್ ಹಾಗೂ ಮಹಾನಗರ ಪಾಲಿಕೆ, ಹುಡಾ ಮತ್ತು ಗುತ್ತಿಗೆ ಪಡೆದವರಲ್ಲಿ ಪರಸ್ಪರ ಸಮನ್ವಯತೆ ಇಲ್ಲದಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಎಕರೆ ಸುತ್ತ ತಡೆಗೋಡೆ ನಿರ್ಮಿಸಲಾಗಿದೆ. ಸಮರ್ಪಕವಾದ ಒಳಚರಂಡಿ ಇಲ್ಲದ ಕಾರಣ ಮಲೀನ ನೀರು ಕೆರೆಗೆ ಹೋಗುತ್ತಿದೆ. ಅಕ್ಕಪಕ್ಕದ ಕೆಲ ಮನೆಯವರು ಶೌಚಾಲಯದ ಪೈಪ್ ಹರಿಬಿಟ್ಟಿದ್ದಾರೆ. ಈ ಕೆರೆ ನವೀಕರಣ ಯೋಜನೆ ಆರಂಭದಲ್ಲಿಯೇ ಒಳಚರಂಡಿ, ಗಟಾರ ನಿರ್ಮಾಣದ ಕುರಿತು ಸಮರ್ಪಕವಾಗಿ ಯೋಜನೆ ರೂಪಿಸಬೇಕಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ, ಹಣ ಪೋಲಾಗಿದೆ ಎಂದು ಶಾಸಕರ ಬಳಿ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.

ಈ ವೇಳೆ ಮಾತನಾಡಿದ ಶಾಸಕರು, ಈ ಕಾಮಗಾರಿ ಕುರಿತು ಸೋಮವಾರ ಹುಡಾ ಮತ್ತು ಕೆಆರ್‌ಡಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ತಮ್ಮಷ್ಟಕ್ಕೆ ತಾವೇ ಡಿಪಿಆರ್ ಸಿದ್ಧಪಡಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಒಳಚರಂಡಿ ಸಮಸ್ಯೆಗೆ ಪರಿಹಾರ ಸಿಕ್ಕರೆ ಮಾತ್ರ ಈ ಯೋಜನೆ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.

ಇಲ್ಲಿ ಒಳಚರಂಡಿ ಕಾಮಗಾರಿಯನ್ನು ಮಹಾನಗರ ಪಾಲಿಕೆ ಕೈಗೊಂಡಿದ್ದು, ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಕೆರೆ ಅಭಿವೃದ್ಧಿಗೆ ಸಂಬಂಧಿಸಿ ₹57 ಲಕ್ಷದ ಕಾಮಗಾರಿ ಬಾಕಿಯಿದ್ದು, ನಂತರ ಅದನ್ನು ಕೈಗೆತ್ತಿಕೊಳ್ಳಲಾಗುವುದು. ಒಂದುವಾರ ಬಿಟ್ಟು ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ತಿಳಿಸಿದರು.

ಈ ವೇಳೆ ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಪ್ರಕಾಶ ಕುರಹಟ್ಟಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಪಾಲಿಕೆ ಸಹಾಯಕ ಅಭಿಯಂತರ ವೆಂಕಟೇಶ ದಂಡಗಿ, ರವಿ ನಾಯ್ಕ ಸೇರಿದಂತೆ ಸ್ಥಳಿಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ