ಬುದ್ಧ ಪ್ರತಿಮೆ, ಅಂಬೇಡ್ಕರ್ ಫ್ಲೆಕ್ಸ್ ವಿರೂಪಕ್ಕೆ ನಾಗವಳ್ಳಿ ಗ್ರಾಮಸ್ಥರ ಖಂಡನೆ

KannadaprabhaNewsNetwork |  
Published : Nov 03, 2025, 02:03 AM IST
 | Kannada Prabha

ಸಾರಾಂಶ

ಅಂಬೇಡ್ಕರ್ ದೇಶಕ್ಕಾಗಿ ಮಾಡಿದಂತಹ ತ್ಯಾಗ, ಅವರು ಕೊಟ್ಟಂತಹ ಸಂವಿಧಾನ ಮನುವಾದಿಗಳಿಗೆ ನುಂಗಲಾರದ ತುತ್ತಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಶಾಂತಿ ಹಾಗೂ ಹಕ್ಕು ಬಾಧ್ಯತೆಗಳನ್ನು ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಇತ್ತೀಚೆಗೆ ಅಂಬೇಡ್ಕರ್ ರ ಭಾವಚಿತ್ರವಿರುವ ನಾಮಫಲಕ ಮತ್ತು ಬುದ್ಧನ ವಿಗ್ರಹವನ್ನು ವಿರೂಪಗೊಳಿಸಿರುವ ಘಟನೆ ಖಂಡಿಸಿ, ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ, ನಾಗವಳ್ಳಿ ಕಟ್ಟೆಮನೆ ಯಜಮಾನರು ಹಾಗೂ ಮುಖಂಡರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಗ್ರಾಮದ ಬಸ್ ನಿಲ್ದಾಣಕ್ಕೆ ತೆರಳಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಅಲ್ಲಿಂದ ಗುಡ್ಡದ ಅಂಬೇಡ್ಕರ್ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದರು.

ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ವಿರೂಪಗೊಳಿಸಿರುವವರನ್ನು ಆದಷ್ಟು ಬೇಗ ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡುವುದು ದಿನೇದಿನೇ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಎಸಗುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಂತೆ ಕಾನೂನು ರೂಪಿಸಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಅಳವಡಿಸಿರುವ ಮಹನೀಯರ ಪ್ರತಿಮೆ ಮತ್ತು ಭಾವಚಿತ್ರಗಳ ಭದ್ರತೆಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಕಮಲ್ ಮಾತನಾಡಿ, ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಪದೇ ಪದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಿಡಿಗೇಡಿಗಳು ಅವಮಾನ ಮಾಡುತ್ತಿರುವುದು ಅತ್ಯಂತ ಖಂಡನೀಯ. ಇಂತಹ ಘಟನೆ ಮರುಕಳಿಸದ ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸುಕುಮಾರ್ ಮಾತನಾಡಿ, ಅಂಬೇಡ್ಕರ್ ದೇಶಕ್ಕಾಗಿ ಮಾಡಿದಂತಹ ತ್ಯಾಗ, ಅವರು ಕೊಟ್ಟಂತಹ ಸಂವಿಧಾನ ಮನುವಾದಿಗಳಿಗೆ ನುಂಗಲಾರದ ತುತ್ತಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಶಾಂತಿ ಹಾಗೂ ಹಕ್ಕು ಬಾಧ್ಯತೆಗಳನ್ನು ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಭಂಗ ಮಾಡಲು ಮನುವಾದಿಗಳು ದೇಶದಾದ್ಯಂತ ಇಂತಹ ಕೃತ್ಯವನ್ನು ಮಾಡಿಸುತ್ತಿದ್ದಾರೆ. ಇಂತಹ ಅಹಿತಕರ ಘಟನೆಗಳು ನಿಲ್ಲಬೇಕು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಹ ಕಿಡಿಗೇಡಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.

ಯಜಮಾನ ಸುಂದರ್ ಮಾತನಾಡಿ, ಅಂಬೇಡ್ಕರ್ ಬರೆದಂತಹ ಸಂವಿಧಾನದ ಅಡಿ ನಾವೆಲ್ಲರೂ ಜೀವನ ಮಾಡುತ್ತಿದ್ದೇವೆ. ಅಂತಹ ಮಹಾನ್ ಚೇತನರಿಗೆ ಈ ರೀತಿಯ ಅಪಮಾನ ಮಾಡಿರುವುದು ಸರಿಯಲ್ಲ. ಇಂತಹ ಘಟನೆ ಮುಂದೆ ಎಲ್ಲಿಯೂ ಆಗಬಾರದು ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ನಾಗವಳ್ಳಿ ಗ್ರಾಮದ ಕಟ್ಟೆಮನೆ ಯಜಮಾನರು, ಯುವಕರು, ಜನಪ್ರತಿನಿಧಿಗಳು ಹಾಗೂ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ