ಪದತ್ಯಾಗ ಮಾಡಲು ಸಿಎಂ ಸೂಚನೆ ಹಿನ್ನೆಲೆ ಸಚಿವ ಬಿ.ನಾಗೇಂದ್ರಇಂದೇ ರಾಜೀನಾಮೆ?

KannadaprabhaNewsNetwork |  
Published : Jun 06, 2024, 01:45 AM IST
ನಾಗೇಂದ್ರ | Kannada Prabha

ಸಾರಾಂಶ

ವಾಲ್ಮೀಕಿ ನಿಗಮ ಕೇಸ್‌ ಸಿಬಿಐ ತನಿಖೆ ಹಿನ್ನೆಲೆ ರಾಜೀನಾಮೆ ನೀಡಲು ನಾಗೇಂದ್ರರಿಗೆ ಸೂಚಿಸಿದ್ದು, ಸಚಿವಗೆ ಅಕ್ರಮ ಹಣ ವರ್ಗಾವಣೆ ಉರುಳು ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸುವಂತೆ ಸಚಿವ ಬಿ.ನಾಗೇಂದ್ರಗೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ, ನಾಗೇಂದ್ರ ಅವರು ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀನಾಮೆ ನೀಡಿದರೆ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್‌ ಪತನವಾದಂತಾಗಲಿದೆ.

ಬುಧವಾರ ತಡರಾತ್ರಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಈ ಸಭೆಗೆ ನಾಗೇಂದ್ರ ಅವರನ್ನು ಕರೆಸಿಕೊಂಡರು. ಈ ವೇಳೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಅದರ ಜತೆಗೆ 50 ಕೋಟಿ ರು.ಗೂ ಹೆಚ್ಚಿನ ಹಣ ದುರುಪಯೋಗವಾಗಿರುವ ಕಾರಣದಿಂದಾಗಿ ಸಿಬಿಐ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು ಬೆಳವಣಿಗೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು ಎನ್ನಲಾಗಿದೆ.

ಇದೇ ವೇಳೆ ಸಭೆಗೆ ನಾಗೇಂದ್ರ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿಯವರು ಪ್ರಕರಣದ ಕುರಿತಂತೆ ನಾಗೇಂದ್ರ ಅವರಿಂದ ವಿವರಣೆ ಪಡೆದರು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಪ್ರಕರಣದಲ್ಲಿ ಈವರೆಗೆ ನಡೆದ ಬೆಳವಣಿಗೆಗಳ ಬಗ್ಗೆ ಸಭೆಗೆ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಮುಂದಾಗಿರುವ ಸಿಬಿಐ ಒಂದು ವೇಳೆ ಸಚಿವ ನಾಗೇಂದ್ರ ಅವರನ್ನು ಬಂಧಿಸಿದರೆ ಅಥವಾ ವಿಚಾರಣೆಗೊಳಪಡಿಸಿದರೆ ಸರ್ಕಾರಕ್ಕೆ ಮುಜುಗರ ಉಂಟಾಗುವ ಸಾಧ್ಯತೆಗಳಿವೆ ಎಂಬ ಅಂಶದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ನಾಗೇಂದ್ರ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ನಾಗೇಂದ್ರ ಗುರುವಾರ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಜಿ.ಪರಮೇಶ್ವರ್‌, ಬೈರತಿ ಸುರೇಶ್, ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।
ಡ್ರಗ್ಸ್‌ ದಂಧೆಯಲ್ಲಿ ಕಾಂಗ್ರೆಸ್‌ ನಿಕಟವರ್ತಿಗಳ ಕೈವಾಡ: ಶಾಸಕ ಅಶ್ವತ್ಥನಾರಾಯಣ