ರಾಜ್ಯ ದಿವಾಳಿಗೆ ತಲುಪಿದರೂ ಅಚ್ಚರಿ ಇಲ್ಲ, ಸರ್ಕಾರ ಶ್ವೇತಪತ್ರ ಹೊರಡಿಸಲಿ: ನಳಿನ್‌ ಕುಮಾರ್‌ ಕಟೀಲ್‌

KannadaprabhaNewsNetwork |  
Published : Feb 04, 2026, 03:15 AM IST
ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಗೂಬೆಕೂರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸ್ಥಿತಿಗತಿ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಆಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ನೀಡಿದರೂ ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡದೆ ಹಣ ಪೋಲು ಮಾಡಿದೆ

ಮಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಗೂಬೆಕೂರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸ್ಥಿತಿಗತಿ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಆಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ನೀಡಿದರೂ ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡದೆ ಹಣ ಪೋಲು ಮಾಡಿದೆ ಎಂದು ಮಾಜಿ ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್‌ ವಿಚಾರದಲ್ಲಿ ಆರೋಪಿಸುವ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸಿಗರು ತಮ್ಮದೇ ರಾಜ್ಯ ಸರ್ಕಾರದ ಹಣ ಪೋಲಾಗುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ. 16 ಬಾರಿ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಅಂದಾಜು ವೆಚ್ಚದ ಕಲ್ಪನೆಯೇ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣವಿಲ್ಲ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ವೇತನ ನೀಡಲೂ ಸಾಧ್ಯವಾಗದೆ ರಾಜ್ಯ ದಿವಾಳಿ ಅಂಚಿಗೆ ತಲುಪಿದರೂ ಅಚ್ಚರಿ ಇಲ್ಲ ಎಂದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಲ್ಲಿ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಅನುದಾನ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಅನುದಾನವನ್ನೂ ನೀಡಿದರೂ ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಲ್ಲ. ವಿತ್ತ ಸಚಿವರ ಸುದ್ದಿಗೋಷ್ಠಿ ಬಗ್ಗೆ ಸಿಎಂ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಜಿಎಸ್‌ಟಿ ಸಭೆಗೂ ತೆರಳದೆ, ಈಗ ಕೇಂದ್ರ ಬಜೆಟ್‌ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ಕಾಂಗ್ರೆಸ್‌ ಹೋರಾಟ ನಡೆಸಿದಷ್ಟು ಅನುಕೂಲ:

ಜಿ.ಪ., ತಾ.ಪಂ. ಹಾಗೂ ಸದ್ಯದಲ್ಲೇ ಗ್ರಾ.ಪಂ. ಚುನಾವಣೆ ನಡೆಸಬೇಕಿದ್ದರೂ ರಾಜ್ಯ ಸರ್ಕಾರ ಅಧಿಕಾರ ಹಂಚಿಕೆಯ ಗೊಂದಲದಲ್ಲೇ ಮುಳುಗಿದೆ. ಇದೇ ಕಾರಣಕ್ಕೆ ಸ್ಥಳೀಯಾಡಳಿತ ಚುನಾವಣೆಯನ್ನು ಮುಂದೂಡುತ್ತಿದೆ. ಆಡಳಿತದ ವೈಫಲ್ಯವನ್ನು ಮರೆಮಾಚಲು ಕೇಂದ್ರ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆ ಮಾಡಿರುವುದನ್ನು ನೆಪವಾಗಿಸಿ ಹೋರಾಟ ನಡೆಸಲು ಹೊರಟಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜಿ ರಾಮ್‌ ಜೀ ಯೋಜನೆ ವಿರುದ್ಧ ಹೋರಾಟ ಮಾಡಿದಷ್ಟು ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಅನುಕೂಲವಾಗಲಿದೆ. ಹಿಂದೆ ನರೇಗದಲ್ಲಿ ನಡೆಯುತ್ತಿದ್ದ ಹಗರಣ ತಪ್ಪಿಸಲು ಕೇಂದ್ರ ಯೋಜನೆಯಲ್ಲಿ ಮಾರ್ಪಾಟು ಮಾಡಿದೆ. ಗಾಂಧೀಜಿ ಸಾಯುವಾಗ ಹೇಳಿದ ಹೇ ರಾಮ್‌ ಹೆಸರನ್ನೇ ನರೇಗ ಯೋಜನೆಗೆ ಇರಿಸಲಾಗಿದೆ. ಇದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸಿಗರು ಗೋಡ್ಸೆಗಿಂತ ಹಲವು ಬಾರಿ ಗಾಂಧಿಯನ್ನು ಕೊಂದಿದ್ದಾರೆ. ಅರ್ಥಾತ್‌ ಗಾಂಧೀಜಿ ಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಸಕ್ರಿಯವಾಗಿ ಕ್ರಿಯಾತ್ಮಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕಾರಣದಲ್ಲಿ ವಿರೋಧಗಳು ಸಹಜ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನ್ನನ್ನು ಒಂದೇ ವಾರದಲ್ಲಿ ಬದಲಾಯಿಸುತ್ತಾರೆ ಎಂದು ಹೇಳುತ್ತಿದ್ದರು, ನಾನು ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷನಾಗಿದ್ದೆ. ಹಾಗಾಗಿ ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದರು. ನಾನು ಟಿಕೆಟ್ ಆಕಾಂಕ್ಷಿಯಲ್ಲ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕಾರ್ಯಕರ್ತನಾಗಿಯೇ ಪಕ್ಷ ಸಂಘಟಿಸುವುದು ನನಗೆ ಹೆಚ್ಚಿನ ತೃಪ್ತಿ ನೀಡುತ್ತದೆ. ದ.ಕ. ಜಿಲ್ಲೆಯ ಸಂಸದರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ಪಷ್ಟ ಕಲ್ಪನೆ, ಗುರಿ ಇದೆ ಎಂದರು.

ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವಾರ್‌, ವಸಂತ ಪೂಜಾರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿತೋ ನಗರ ಪ್ರತಿನಿಧಿಗಳ ನೇಮಕ
ಅಂಕಗಳು ಮಾತ್ರ ಉದ್ಯೋಗ ಪಡೆಯಲು ಮಾನದಂಡವಲ್ಲ: ಪ್ರಮೋದ್ ಭಾಸ್ಕರ್ ಕುಮಾರ್