ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಾಟಿ ಯಾರೂ ಇಲ್ಲ: ಆರ್. ಅಶೋಕ್

KannadaprabhaNewsNetwork |  
Published : Jul 28, 2025, 12:30 AM IST
27ಕೆಎಂಎನ್ ಡಿ22,23 | Kannada Prabha

ಸಾರಾಂಶ

ನಾಲ್ವಡಿ ಅವರು ಜನಸೇವೆಯನ್ನೇ ಗುರುಯಾಗಿಸಿಕೊಂಡವರು. ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಶಿಕ್ಷಣ, ಆರೋಗ್ಯ, ಕೃಷಿ, ಕೆರೆಗಳ ಪುನಶ್ಚೇತನ, ಬ್ಯಾಂಕ್‌ಗಳ ಸ್ಥಾಪನೆ, ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಶಾಶ್ವತ ಕೊಡುಗೆಗಳನ್ನು ನೀಡಿರುವುದರಿಂದಲೇ ಅವರು ನಾಡಿನ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ. ನಾಲ್ವಡಿ ಅವರು ನಾಡಿನ ಜನರಿಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಕೊಡುಗೆ ನೀಡಿದರೆ, ನವಾಬರು ತಮ್ಮ ಮನೆ ಕುಟುಂಬಕ್ಕೆ ಸೀಮಿತವಾಗಿ ಆಡಳಿತ ನಡೆಸಿದರು ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮುಖ್ಯಮಂತ್ರಿಗಳ ಹೆಸರೇಳದೆ ಮನಚು ಮಾತುಗಳಿಂದ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಎಸ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಐದನೇ ವರ್ಷದ ವಾರ್ಷಿಕೋತ್ಸವ, ಗುರುವಂದನೆ ಹಾಗೂ ಒಂದು ವರ್ಷ ವಿಪಕ್ಷ ನಾಯಕನಾಗಿ ಅವಧಿ ಪೂರೈಸಿದ ಆರ್.ಅಶೋಕ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಾಲ್ವಡಿ ಅವರು ಜನಸೇವೆಯನ್ನೇ ಗುರುಯಾಗಿಸಿಕೊಂಡವರು. ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಶಿಕ್ಷಣ, ಆರೋಗ್ಯ, ಕೃಷಿ, ಕೆರೆಗಳ ಪುನಶ್ಚೇತನ, ಬ್ಯಾಂಕ್‌ಗಳ ಸ್ಥಾಪನೆ, ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಶಾಶ್ವತ ಕೊಡುಗೆಗಳನ್ನು ನೀಡಿರುವುದರಿಂದಲೇ ಅವರು ನಾಡಿನ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂದರು.

ನಾಲ್ವಡಿ ಅವರಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುವವರು ತಾವು ಮಾಡಿರುವ ಕೆಲಸಗಳನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಎಷ್ಟು ಮನೆಗಳನ್ನು ಹಾಳು ಮಾಡಿದವು, ಜನರಿಗೆ ಎಷ್ಟು ತೊಂದರೆ ಕೊಟ್ಟೆವು, ಎಷ್ಟು ಜನರು ನೋವನ್ನು ಅನುಭವಿಸಿದರು ಈ ಎಲ್ಲಾ ಲೆಕ್ಕವೂ ಜನರ ಬಳಿ ದಾಖಲಾಗದಿದ್ದರೂ ಯಮನ ಹತ್ತಿರ ದಾಖಲಾಗಿರುತ್ತದೆ. ಅಲ್ಲಿ ನೀವು ಮಾಡಿರುವ ಪುಣ್ಯ ಕಾರ್ಯಗಳನ್ನು ಲೆಕ್ಕ ಮಾಡಿ ಮುಂದಿನ ಜನ್ಮ ಎನ್ನುವುದಿದ್ದರೆ ನೀವು ಏನಾಗಬೇಕೆಂಬುದು ನಿರ್ಧಾರವಾಗುತ್ತದೆ ಎಂದು ಚುಚ್ಚಿ ನೋಡಿದರು.

ನಾವು ಮಾಡುವ ಕೆಲಸ ಒಳ್ಳೆಯದಾಗಿದ್ದರೆ ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ಜನರೇ ಅದನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ. ಸಮಾಜಕ್ಕೆ ನಾವೇನು ಒಳ್ಳೆಯ ಕೆಲಸಗಳನ್ನು ಮಾಡಿದೆವು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಸಾಕು ಎಂದರು.

ಕನ್ನಡ ನಾಡಿನಲ್ಲಿ ಇರುವಂತಹ ಜನರನ್ನು ದೇಶದ ಬೇರೆ ಯಾವುದೇ ಭಾಗದಲ್ಲೂ ನೋಡಲು ಸಾಧ್ಯವಿಲ್ಲ. ಕರುಣೆ ಪ್ರೀತಿ ಅಂತಃಕರಣ ತುಂಬಿಕೊಂಡ ಜನರು ಇಲ್ಲಿದ್ದಾರೆ. ಜನರು ನಮ್ಮನ್ನು ನೆನೆಯುವ ರೀತಿಯಲ್ಲಿ ಕೆಲಸ ಮಾಡಬೇಕು. ನಾನೇ ಎಂದು ಅಹಂಕಾರ ಪಡುವವರನ್ನು ಜನರು ಮನಸ್ಸಿನಲ್ಲಿ ಎಂದು ಇಟ್ಟುಕೊಳ್ಳುವುದಿಲ್ಲ. ಜನಾನುರಾಗಿ ವ್ಯಕ್ತಿತ್ವ ಮತ್ತು ಜನಪರ ಆಡಳಿತಗಾರರನ್ನಷ್ಟೇ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಸೂಚ್ಯವಾಗಿ ನುಡಿದರು.

ವಿರೋಧ ಪಕ್ಷದ ನಾಯಕನಾಗಿ ನಾನು ಆ ಸ್ಥಾನದಲ್ಲಿ ಕುಳಿತಿರುವುದು ಹೊಗಳುವುದಕ್ಕಲ್ಲ. ಸರ್ಕಾರ ಮಾಡುವ ತಪ್ಪುಗಳನ್ನು ಜನರಿಗೆ ಹೇಳುವುದು ನನ್ನ ಕೆಲಸ. ಆ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ. ಅದು ಬೇರೆಯವರಿಗೆ ಇಷ್ಟವಾಗದಿದ್ದರೆ ನಾನೇನು ಮಾಡಲಾಗುವುದಿಲ್ಲ ಎಂದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಾಲ್ವಡಿ ಅವರು ನಮ್ಮ ಹೆಮ್ಮೆ. ಅವರ ಆದರ್ಶ ಮತ್ತು ಆಡಳಿತ ಸರ್ವ ಕಾಲಕ್ಕೂ ಮಾದರಿಯಾಗುವಂತಹದ್ದು. ಅವರ ಕೊಡುಗೆಗಳು ಮೈಸೂರು ಸಂಸ್ಥಾನದ ಉದ್ದಗಲಕ್ಕೂ ಹರಡಿಕೊಂಡಿವೆ ಎಂದರು.

ಯಾವ ವ್ಯಕ್ತಿ ತಾನು ಬದುಕಿದ್ದಾಗ ಬೇರೆಯವರಿಗಾಗಿ ಬದುಕಿರುತ್ತಾನೋ ಆತ ಸತ್ತ ನಂತರವೋ ಜೀವಂತವಾಗಿರುತ್ತಾನೆ. ಯಾರು ತಮಗೋಸ್ಕರ ಬದುಕಿರುತ್ತಾರೋ ಅವರು ಬದುಕಿರುವಾಗಲೇ ಸತ್ತಂತೆ ಇರುತ್ತಾರೆ. ಜೀವನದಲ್ಲಿ ಯಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಆದರ್ಶವಾಗಿ ಬದುಕಿರುತ್ತಾರೋ ಅಂತಹವರ ಬದುಕು ಸಾರ್ಥಕವಾಗುತ್ತದೆ ಎಂದರು.

ತಂದೆ ತಾಯಿ ಮಾಡಿದ ಒಳ್ಳೆಯ ಕೆಲಸಗಳನ್ನು ಮಕ್ಕಳು ಮುಂದುವರೆಸಿದರೆ ಹೆತ್ತವರ ಜನ್ಮ ಸಾರ್ಥಕವಾಗುತ್ತದೆ. ನಮ್ಮ ಪ್ರೀತಿ ಪಾತ್ರರು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವರನ್ನು ನೆನೆದು ಕೊರಗುವುದಕ್ಕಿಂತ ಅವರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಮಾಡಬೇಕು ಎಂದು ಅಮೇರಿಕಾದ ಹಾರ್ವರ್ಡ್ ಯುನಿವರ್ಸಿಟಿಯ ಹಿಂದಿನ ಕಥೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಅವರ ಪತ್ನಿ ಪ್ರಮೀಳಾ ರಾಣಿ ಅವರನ್ನು ಅಭಿನಂದಿಸಲಾಯಿತು. ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃತಿಕ್ಷಾ ಸುರಕ್ಷಾ ಹೆಸರಿನಲ್ಲಿ ಸಾಂಕೇತಿಕವಾಗಿ ಹೆಲ್ಮೆಟ್ ಗಳನ್ನು ವಿತರಿಸಲಾಯಿತು. ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗುರುವಂದನೆ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಮ್ಮೇನಹಳ್ಳಿ ಶಾಖಾಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಹಾಸನದ ಶಂಭುನಾಥ ಸ್ವಾಮೀಜಿ, ಮಾಜಿ ಸಚಿವ ಕೆ.ಸಿಯನಾರಾಯಣಗೌಡ, ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ,, ಎಸ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಸ್. ಸಚ್ಚಿದಾನಂದ, ಅಶೋಕ್ ಜಯರಾಮ್, ಪೀಹಳ್ಳಿ ರಮೇಶ್, ಶ್ರೀಧರ್, ಎಸ್.ಎಲ್.ಲಿಂಗರಾಜು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬಡತನ ನಿರ್ಮೂಲನೆಗೆ ಸಂಜೀವಿನಿ ಸಹಕಾರಿ
ರೈತರು ಸರ್ಕಾರದ ಸೌಕರ್ಯ ಪಡೆಯಲು ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ