ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು, ಸಮಸ್ಯೆಗೆ ಶೀಘ್ರ ಪರಿಹಾರಕ್ಕೆ ಡಿಸಿ ಸೂಚನೆ

KannadaprabhaNewsNetwork |  
Published : Oct 30, 2024, 12:47 AM IST
45445 | Kannada Prabha

ಸಾರಾಂಶ

ರೈತರ ಬೆಂಬಲಕ್ಕೆ ಹಲವರು ನಿಂತಿದ್ದು, ರೈತರೊಂದಿಗೆ ಬುಧವಾರ ಶ್ರೀರಾಮಸೇನೆಯು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಸಿದ್ಧವಾದರೆ, ಬಿಜೆಪಿ ಮುಖಂಡರ ನಿಯೋಗವು ಮಂಗಳವಾರ ಸಂಜೆ ಗ್ರಾಮದ ರೈತರ ಮನೆಗಳಿಗೆ ಹೋಗಿ ರೈತರೊಂದಿಗೆ ಈ ಕುರಿತು ಸಮಾಲೋಚನೆ ಮಾಡಿದೆ.

ಧಾರವಾಡ:

ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೆಲವು ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ನಮೂದಾಗಿರುವ ಸಂಗತಿ ಇದೀಗ ಸಂಚಲನ ಮೂಡಿಸಿದ್ದು, ಜಿಲ್ಲಾಧಿಕಾರಿ ದಿವ್ಯಪ್ರಭು ಮಂಗಳವಾರ ತಹಸೀಲ್ದಾರ್‌ ಅವರನ್ನು ಕರೆಯಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.

ವಿಜಯಪುರ ಹಾಗೂ ಧಾರವಾಡದ ರೈತರ ಜಮೀನಿನ ಪಹಣಿಗಳು ವಕ್ಫ್‌ ಮಂಡಳಿಗೆ ಸೇರಿರುವ ಸಂಗತಿ ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಬಂದಿದ್ದೇ ತಡ, ತಹಸೀಲ್ದಾರ್‌ ದೊಡ್ಡಪ್ಪ ಹೂಗಾರ ಅವರನ್ನು ಕರೆಯಿಸಿ, ಆದಷ್ಟು ಶೀಘ್ರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಇದರೊಂದಿಗೆ ರೈತರ ಬೆಂಬಲಕ್ಕೆ ಹಲವರು ನಿಂತಿದ್ದು, ರೈತರೊಂದಿಗೆ ಬುಧವಾರ ಶ್ರೀರಾಮಸೇನೆಯು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಸಿದ್ಧವಾದರೆ, ಬಿಜೆಪಿ ಮುಖಂಡರ ನಿಯೋಗವು ಮಂಗಳವಾರ ಸಂಜೆ ಗ್ರಾಮದ ರೈತರ ಮನೆಗಳಿಗೆ ಹೋಗಿ ರೈತರೊಂದಿಗೆ ಈ ಕುರಿತು ಸಮಾಲೋಚನೆ ಮಾಡಿತು. ಪಹಣಿಯಲ್ಲಿ ರೈತರಿಗೆ ಆಗಿರುವ ಅನ್ಯಾಯ ಕುರಿತು ಧ್ವನಿ ಎತ್ತಿ ತಪ್ಪು ಸರಿಪಡಿಸಿಕೊಡುವುದಾಗಿ ಬಿಜೆಪಿ ಮುಖಂಡರು ರೈತರಿಗೆ ಭರವಸೆ ನೀಡಿದರು.

ಇನ್ನು, ಈ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈಗಾಗಲೇ ಉಪ್ಪಿನಬೆಟಗೇರಿ ರೈತರ ಭೇಟಿ ಮಾಡಿದ್ದು, ಕೆಲವೊಂದು ಆಘಾತಕಾರಿ ವಿಷಯ ಗಮನಕ್ಕೆ ಬಂದಿದೆ. 2018ರ ನಂತರ ಈ ನೋಂದಣಿ ಪ್ರಕ್ರಿಯೆ ಆಗಿದೆ. ಏಕೆ? ಯಾರು? ಮಾಡಿದ್ದಾರೆ ಎನ್ನುವುದು ನಿಗೂಢವಾಗಿದೆ. ಇದನ್ನು ಸರಿಪಡಿಸಲು ರೈತರು 3-4 ವರ್ಷದಿಂದ ತಹಸೀಲ್ದಾರ್‌ ಕಚೇರಿ ಹಾಗೂ ವಕ್ಫ್‌ ಮಂಡಳಿಗೆ ಅಲೆದಾಡಿದ್ದಾರೆ. ಗ್ರಾಮದಲ್ಲಿ 15 ವರ್ಷಗಳಿಂದ ಒಬ್ಬನೇ ಪಿಡಿಒ ಇದ್ದು, ಆ ವ್ಯಕ್ತಿ ಈ ರೀತಿಯ ಕುತಂತ್ರಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡ್‌ನವರು ಮುತವಲ್ಲಿಯಿಂದ ಪತ್ರ ತನ್ನಿ ಎಂದಿದ್ದಾರೆ. ಮುತವಲ್ಲಿಗೂ ಸರ್ಕಾರಕ್ಕೂ ಏನು ಸಂಬಂಧ? ಮುತವಲ್ಲಿಗೂ ವಕ್ಫ್ ಬೋರ್ಡ್‌ಗೂ, ಪಹಣಿ ನೋಂದಣಿಗೆ ಏನು ಸಂಬಂಧ? ಮುತವಲ್ಲಿ ಮುಸ್ಲಿಂ ಸಮಾಜಕ್ಕೆ, ಮಸೀದಿಗೆ ಮಾತ್ರ ಸಂಬಂಧ. ರೈತರ ಜಮೀನಿಗೂ ಮುತವಲ್ಲಿಗೂ ಏನು ಸಂಬಂಧ ಎಂದು ಮುತಾಲಿಕ ಪ್ರಶ್ನಿಸಿದರು.

ನಾಳೆ ಜಾತ್ರೆ, ಉತ್ಸವಕ್ಕೂ ಮುತವಲ್ಲಿಯಿಂದ ಪತ್ರ ತನ್ನಿ ಎನ್ನುವ ಪರಿಸ್ಥಿತಿ ಬರಬಹುದು. ಇದು ಭಯಾನಕವಾದ ಪ್ರಕ್ರಿಯೆ. ಆ ರೈತರದ್ದು ನೂರು ವರ್ಷದ ಜಮೀನು ದಾಖಲೆ ಇದೆ. ಒಂದು ಸ್ವಾತಂತ್ರ್ಯ ಹೋರಾಟಗಾರರ ಮನೆತನವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಿಗೂ ಮೋಸ ಮಾಡುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ. ರೈತರು ಜಾಗ್ರತರಾಗಬೇಕು. ಆದ್ದರಿಂದ ಬುಧವಾರ ತಹಸೀಲ್ದಾರ್‌ ಕಚೇರಿ ಎದುರು ಗ್ರಾಮದ ಹಾಗೂ ಸುತ್ತಲಿನ ರೈತರಿಂದ ಪ್ರತಿಭಟನೆ ಮಾಡುತ್ತೇವೆ ಎಂದರು.

ದೇಶದಲ್ಲಿ ವಕ್ಫ್ ಬೋರ್ಡ್ ಸಂಪೂರ್ಣ ವಿಸರ್ಜಿಸಬೇಕು ಎಂದಿರುವ ಮುತಾಲಿಕ್‌, ಈಗ ನಿಯಮಾವಳಿ 42ಕ್ಕೆ ತಿದ್ದುಪಡಿ ಮಾಡುತ್ತಿದ್ದು, ನಮ್ಮ ಬೆಂಬಲ ಇದೆ. ಮುಂದೆ ಸಂಪೂರ್ಣ ವಿಸರ್ಜನೆಯಾಗಬೇಕು. ದೇಶದಲ್ಲಿ 9.40 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್‌ಗೆ ಇದೆ. ಇದು ಎಷ್ಟು ಅತಿಕ್ರಮಣ ಆಗಿದೆ ಎನ್ನುವುದನ್ನು ತೋರಿಸುತ್ತದೆ. ಪಾಕಿಸ್ತಾನ, ಇರಾನ್, ಇರಾಕ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ಜಮೀನಿಲ್ಲ ಎಂದು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ