ಗಿಡದಲ್ಲಿಯೇ ಮೊಳಕೆಯೊಡೆದ ಹೆಸರು, ರೈತರು ಕಂಗಾಲು

KannadaprabhaNewsNetwork |  
Published : Aug 09, 2025, 12:02 AM IST
ಪೋಟೊ8ಕೆಎಸಟಿ3: ಕುಷ್ಟಗಿ ಪಟ್ಟಣದ ಹೊಲವಂದರಲ್ಲಿ ಇರುವ ಹೆಸರು ಬೆಳೆ. ಹಾಗೂ ಗಿಡಗಳಲ್ಲಿಯೆ ಮೊಳಕೆಯೊಡೆದ ಹೆಸರು ಕಾಯಿ. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹನುಮಸಾಗರ, ಹನಮನಾಳ, ತಾವರಗೇರಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 2983 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಬೆಳೆ ಗಿಡಗಳಲ್ಲಿಯೇ ಮೊಳಕೆ ಯೊಡೆಯುತ್ತಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರ ಜತೆಗೆ ಬೆಳೆ ಕಟಾವು ಮಾಡಲು ಕೂಲಿಕಾರರ ಕೊರತೆ ರೈತರನ್ನು ಸಂಕಷ್ಟಕ್ಕೆ ನೂಕಿದೆ.

ರೈತರಿಗೆ ಹೊರೆ:

ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಸುರಿದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹನುಮಸಾಗರ, ಹನಮನಾಳ, ತಾವರಗೇರಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 2983 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ. ಈಗ ಹೆಸರು ಬೆಳೆ ಕೈ ಸೇರುವ ಹೊತ್ತಿಗೆ ಕೂಲಿಕಾರರ ಕೊರತೆ ಕಾಡುತ್ತಿದೆ. ಜತೆಗೆ ಮಳೆಯು ಸುರಿಯುತ್ತಿದೆ. ದುಡಿಯುವ ಕೈಗಳಿಗೆ ಬೇಡಿಕೆ ಹೆಚ್ಚಾಗಿದ್ದು ₹ 250 ಇರುವ ಕೂಲಿ ಈ ವರ್ಷ ₹ 350ರಿಂದ ₹ 400 ವರೆಗೆ ಏರಿದೆ. ಕೂಲಿಕಾರರಿಗೆ ವರವಾದರೆ ರೈತರಿಗೆ ಹೊರೆಯಾಗಿದೆ. ಹೆಸರು ಬೆಳೆಗೆ ರೋಗಬಾಧೆ ತಗುಲಿದ್ದರಿಂದ ರೈತರು ರಾಸಾಯನಿಕ ಸಿಂಪಡಣೆ ಮಾಡಿ ಕೀಟದ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳುವುದೇ ಸವಾಲಾಗಿತ್ತು. ಈಗ ಒಣಗಿದ ಹೆಸರು ಕಾಯಿ ಬಿಡಿಸಿಕೊಳ್ಳಬೇಕೆಂದರೆ ಇತ್ತ ಮಳೆಯೂ ಬಿಡುತ್ತಿಲ್ಲ. ಅತ್ತ ಕಾರ್ಮಿಕರು ಸಿಗುತ್ತಿಲ್ಲ.

ಗಾಯದ ಮೇಲೆ ಬರೆ:

ಗ್ರಾಮೀಣ ಪ್ರದೇಶದಲ್ಲಿ ಬಿತ್ತನೆಯಾದ ಹೆಸರು ಬೆಳೆಗೆ ಹಳದಿ ಬಂಜೇತನದ ರೋಗದ ಸಮಸ್ಯೆ ಉಂಟಾಯಿತು. ಕಾಯಿಗೆ ಹತ್ತಿದ ಹುಳುಬಾಧೆ ನಿವಾರಣೆಗೆ ದುಬಾರಿ ರಾಸಾಯನಿಕ ಖರೀದಿಸಿ ಮೂರು-ನಾಲ್ಕು ಬಾರಿ ಸಿಂಪಡಿಸಿದ್ದರೂ ಬಹಳಷ್ಟು ಕಾಯಿ ಹಾಳಾಗಿವೆ. ಬಿಸಿಲು ಬಿದ್ದರೆ ಕಾಯಿ ಸಿಡಿಯುತ್ತವೆ ಎಂಬ ಕೊರಗು ರೈತರದ್ದಾಗಿದೆ. ಅತ್ತ ಬಹುತೇಕ ಕೂಲಿ ಕಾರ್ಮಿಕರು ಹತ್ತಿ ಪ್ಲಾಟ್ ಸೇರಿದಂತೆ ವಿವಿಧ ಕೆಲಸ, ನರೇಗಾ ಕಾಮಗಾರಿಯಲ್ಲಿ ದುಡಿಯುತ್ತಿರುವುದರಿಂದ ರೈತರಿಗೆ ಕಾರ್ಮಿಕರೇ ಸಿಗದಂತೆ ಆಗಿದೆ.

ಬೇಡಿಕೆ ಹೆಚ್ಚಳ:

ಹೆಸರು ಬೆಳೆ ಬಿತ್ತನೆ ಮಾಡಿದಾಗ ಅತಿವೃಷ್ಟಿ, ಬಳಿಕ ಅನಾವೃಷ್ಟಿ ನಂತರ ರೋಗಬಾಧೆ ಸೇರಿದಂತೆ ವಿವಿಧ ಸಂಕಷ್ಟಗಳನ್ನು ಎದುರಿಸಿದ್ದ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಸರು ಕಾಳುಗೆ ಬೇಡಿಕೆ ಹೆಚ್ಚಾಗಿದೆ. ಇರುವ ಅಲ್ಪಸ್ವಲ್ಪ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ರೈತರಿಗೆ ಆಗುತ್ತಿಲ್ಲ.ಕೂಲಿಕಾರರ ಕೊರತೆಯಿಂದಾಗಿ ₹ 250ರಿಂದ ₹ 350ಕ್ಕೆ ಕೂಲಿ ದರ ಹೆಚ್ಚಳವಾಗಿದೆ. ಜಮೀನಿಗೆ ಕರೆದುಕೊಂಡು ಹೋಗಿ ಬರಲು ವಾಹನದ ವ್ಯವಸ್ಥೆ ಮಾಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಇದೀಗ ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದ ಬೆಳೆ ಮೊಳಕೆ ಹೊಡೆಯುತ್ತಿದ್ದು ಮಾಡಿದ ಖರ್ಚು ಸಹ ಬರುವುದಿಲ್ಲವೆಂಬ ಆತಂಕ ಶುರುವಾಗಿದೆ.

ಜಮದಗ್ನಿ ಗುರಿಕಾರ ರೈತ ಕುಷ್ಟಗಿ

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ