ಕನ್ನಡಪ್ರಭ ವಾರ್ತೆ ಚಾಮರಾಜನಗರಮುಂದಿನ ಲೋಕಸಭಾ ಚುನಾವಣೆಗೆ, ಚಾಮರಾಜನಗರ ಲೋಕಸಭಾ ಚುನಾವಣೆಗೆ ನಿಮ್ಮ ಅಳಿಯಂದರ ಹೆಸರನ್ನು ಬಿಟ್ಟು ಕಳೆದ ೫೦ ವರ್ಷಗಳಿಂದ ನಿಮ್ಮ ಜೊತೆಯಲ್ಲಿ ಇದ್ದು ನಿಮ್ಮ ಗೆಲುವಿಗೆ ಶ್ರಮಿಸಿರುವ ಸ್ಥಳೀಯ ಮುಖಂಡರನ್ನು ಹೆಸರಿಸಿ ನಿಮ್ಮ ಗೌರವ ಹೆಚ್ಚಾಗುತ್ತದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ದಲಿತ ಹಾಗೂ ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ವಿ.ಶ್ರೀನಿವಾಸಪ್ರಸಾದ್ ತಮ್ಮ ಅಳಿಯ ಡಾ.ಮೋಹನ್ ಅವರಿಗೆ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವ ಪ್ರಯತ್ನ ಕೈ ಬಿಡಬೇಕು ಯಾವ ಮಾನದಂಡ ಇಟ್ಟುಕೊಂಡು ಅಳಿಯನಿಗೆ ಟಿಕೇಟ್ ಕೇಳುತ್ತಿದ್ದೀರಿ ಎಂದರು.ಕ್ಷೇತ್ರದ ಮತದಾರರು ಮುಗ್ಧರು, ಅವರಿಗೆ ಮೋಸ ಮಾಡಬೇಡಿ, ಸ್ವಾರ್ಥಕ್ಕಾಗಿ ವೈದ್ಯರಾಗಿದ್ದ ತಮ್ಮ ಅಳಿಯ ಡಾ.ಮೋಹನ್‌ನನ್ನು ಹುದ್ದೆಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಲು ಕರೆ ತರುವ ಅನಿವಾರ್ಯತೆ ಇರಲಿಲ್ಲ. ಕ್ಷೇತ್ರದಲ್ಲಿ ತುಂಬಾ ಜನ ದಲಿತ ಮುಖಂಡರಿದ್ದು ಅವರನ್ನೇ ಬೆಂಬಲಿಸಬಹುದಿತ್ತು ಇದರಿಂದ ನಿಮ್ಮ ಗೌರವ ಹೆಚ್ಚಾಗುತ್ತಿತ್ತು ಎಂದರು.ನಿಮ್ಮ ಮನೆಯವರನ್ನೇ ವಿಧಾಸಭೆಗೂ, ಲೋಕಸಭೆಗೂ ನಿಲ್ಲಿಸುವುದಾದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಗೌರವ ಏನು ಕೊಡುತ್ತೀರಾ, ವಿ.ಶ್ರೀನಿವಾಸಪ್ರಸಾದ್ ಅವರಿಗಾಗಿ ಆಯಸ್ಸು, ಹಣ ಕಳೆದುಕೊಂಡಿದ್ದೇವೆ. ಇವರನ್ನು ಬೆಂಬಲಿಸಿ ಅನೇಕ ದಲಿತ ನಾಯಕರು ಹತಾಶರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ನಾವೆಲ್ಲ ಆಕಾಂಕ್ಷಿಗಳಾಗಿದ್ದು,ಪಕ್ಷದ ವರಿಷ್ಠರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದರು.
ಕುಟುಂಬ ರಾಜಕಾರಣ ಕುರಿತು ವಿ.ಶ್ರೀನಿವಾಸಪ್ರಸಾದ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಗಳ ವಿರುದ್ದ ಮಾತನಾಡುತ್ತಿದ್ದರು. ಆದರೆ, ಈಗ ಅವರೇ ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡಿರುವುದು ವಿಪರ್ಯಾಸ. ವಿ.ಶ್ರೀನಿವಾಸಪ್ರಸಾದ್ ಅವರ ಮೇಲೆ ಅಪಾರ ಗೌರವವಿದೆ. ಆ ಗೌರವದಿಂದಲೇ ಕಳೆದ ಬಾರಿ ಅವರನ್ನು ಗೆಲ್ಲಿಸಿದ್ದೇವೆ, ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ, ಕೂಡಲೇ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸುವ ಯತ್ನ ಬಿಟ್ಟು ಬೇರೆಯವರಿಗೆ ಬೆಂಬಲಿಸಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮುತ್ತಿಗೆ ಮೂರ್ತಿ, ಭಾನುಪ್ರಕಾಶ್ ಇದ್ದರು.