ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ 624 ಹೆಕ್ಟೇರ್ ಮೀಸಲಿಟ್ಟ ಅರಣ್ಯ ಪ್ರದೇಶಕ್ಕೆ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮೀಸಲು ಅರಣ್ಯ ಪ್ರದೇಶವೆಂದು ಮರುನಾಮಕರಣ ಮಾಡಬೇಕೆಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನ ಅವರಿಗೆ ಮನವಿ ಮಾಡಿದ್ದಾರೆ.ಜಿಲ್ಲೆಯ ಮಮದಾಪುರ ಗ್ರಾಮದಲ್ಲಿ ಆದಿಲ್‍ಶಾಹಿ ಸುಲ್ತಾನರ ಕಾಲದ ಇತಿಹಾಸ ಪ್ರಸಿದ್ಧ ದೊಡ್ಡ ಕೆರೆ, ಸಣ್ಣ ಕೆರೆಗಳ ನೀರಿನ ಪಾತ್ರದಲ್ಲಿರುವ ಇದು ವಿಜಯಪುರ ಜಿಲ್ಲೆಯ ಏಕೈಕ ಕಾಯ್ದಿಟ್ಟ 624 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶವಿದೆ. ಇದು ಈ ಪ್ರದೇಶಕ್ಕೆ ಮುಕುಟಪ್ರಾಯವಾಗಿದೆ.
ಕಳೆದ ಮೂರು ವರ್ಷಗಳಿಂದ ಕೂಡಗಿ ಎನ್‌ಟಿಪಿಸಿ ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇಲ್ಲಿ ಹೊಂಗೆ, ಬೇವು, ಅರಳಿ, ಆಲ, ಅತ್ತಿ, ಬಸರಿ, ನೆರಳೆ, ಶ್ರೀಗಂಧ, ಹುಣಸೆ ಅಲ್ಲದೇ ಬಗೆಬಗೆಯ ಹಣ್ಣಿನ ಸಸಿಗಳನ್ನು ನೆಟ್ಟು, ಪೋಷಿಸಲಾಗುತ್ತಿದೆ. ಸದ್ಯ ಈ ಗಿಡಗಳು ಸೊಂಪಾಗಿ ಬೆಳೆದು ಹಸಿರು ಹೊದಿಕೆಯಂತಾಗಿದೆ. ಜೀವ ವೈವಿಧ್ಯ ತಾಣವಾಗುವ ಹಂತದಲ್ಲಿದೆ.ಅನಂತದಲ್ಲಿ ಅನಂತರಾಗಿ ಉಳಿದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ತಮ್ಮ ಅಂತಿಮ ಅಭಿವಂದನಾ ಪತ್ರದಲ್ಲಿ ತಿಳಿಸಿದಂತೆ, ತಮಗಾಗಿ ಯಾವುದೇ ಸ್ಮಾರಕಗಳನ್ನು ನಿರ್ಮಿಸದೆ, ನಿಸರ್ಗದಲ್ಲಿಯೇ ಒಂದಾಗಿದ್ದಾರೆ. ಇಂತಹ ಪೂಜ್ಯನೀಯರ ವಿಚಾರಗಳನ್ನು ಅವರ ಆಶಯದಂತೆ ನಡೆದುಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳ ನೆನಪಿನಲ್ಲಿ ಒಂದು ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲು ಘೋಷಣೆ ಮಾಡಿದ್ದಾರೆ. ಸರ್ಕಾರದ ಈ ಆಶಯ ಮತ್ತು ಘೋಷಣೆಯಂತೆ ಮಮದಾಪುರ ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮಮದಾಪುರ ಮೀಸಲು ಅರಣ್ಯ ಪ್ರದೇಶವನ್ನು ಸಿದ್ದೇಶ್ವರ ಶ್ರೀಗಳ ಮೀಸಲು ಅರಣ್ಯ ಪ್ರದೇಶವೆಂದು ಮರುನಾಮಕರಣ ಮಾಡುವುದರಿಂದ ಸರ್ಕಾರದ ಘೋಷಣೆ ಈಡೇರುವುದರ ಜೊತೆಗೆ ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಿದಂತಾಗುತ್ತದೆ. ಜತೆಗೆ ಜನರಲ್ಲಿ ಈ ಅರಣ್ಯದ ಬಗ್ಗೆ ಪೂಜ್ಯ ಭಾವನೆ ಮೂಡುತ್ತದೆ.
ಮಮದಾಪುರ ಮೀಸಲು ಅರಣ್ಯ ಪ್ರದೇಶವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿ ಮೀಸಲು ಅರಣ್ಯ ಎಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಎಂ.ಬಿ.ಪಾಟೀಲ ಭೇಟಿ ಮಾಡಿ ವಿನಂತಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಣ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.