ಕುದೂರು: ಕುದೂರು ಗ್ರಾಮದಲ್ಲಿ ಕನ್ನಡ ಕವಿಗಳ ಹೆಸರಿನ ನಾಮಫಲಕಗಳು ಚರಂಡಿ ಮುಚ್ಚುವ ಕಲ್ಲುಗಳಾಗಿ, ಸೊಂಟ ಮುರಿದು ಜನರ ಕಾಲ್ತುಳಿತಕ್ಕೆ ಒಳಗಾಗಿ ಕವಿಗಳ ಆತ್ಮ ನೋವಿನಿಂದ ನರಳುವಂತೆ ಮಾಡಿದ ಕೆಟ್ಟ ಕೀರ್ತಿ ಕುದೂರು ಗ್ರಾಮ ಪಂಚಾಯಿತಿಗೆ ಸಲ್ಲುತ್ತದೆ. 2008ರಲ್ಲಿ ಕುದೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು. ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿಗಳು ಸಮ್ಮೇಳನದ ಅಧ್ಯಕ್ಷರಾಗಿ, ಮಾಸ್ಟರ್ ಹಿರಣ್ಣಯ್ಯರವರು, ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಭಾಗವಹಿಸಿ ಯಶಸ್ವಿಯಾದ ಸಮ್ಮೇಳನವಾಗಿತ್ತು. ಇದರ ಸವಿ ನೆನಪಿಗಾಗಿ ಗ್ರಾಮದ ಬೀದಿಗಳಿಗೆ ಕನ್ನಡದ ಕವಿಗಳ ಸಾಹಿತಿಗಳ ಹೆಸರುಗಳನ್ನು ಇಡುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಯಿತು. ಅಂದಿನ ಗ್ರಾಮ ಪಂಚಾಯ್ತಿ ಅಡಳಿತ ಮಂಡಳಿಯವರು ಒಂದು ರೆಸ್ಯುಲ್ಯೂಷನ್ ಮಾಡಿ ಯಾವ್ಯಾವ ರಸ್ತೆಗೆ ಯಾವ ಕವಿಗಳ ಹೆಸರುಗಳನ್ನು ಇಡಬೇಕು ಎಂದು ತೀರ್ಮಾನ ಮಾಡಿದ್ದರು. ಅದರಂತೆ ನಾಮಫಲಕಗಳನ್ನು ಬರೆಸಲಾಯಿತು. ಆಗಾಗ್ಗೆ ಅದು ಮುರಿದು ಬಿದ್ದಾಗ ಅಂದಿನ ಗ್ರಾಮ ಪಂಚಾಯ್ತಿಯವರು ರಿಪೇರಿ ಮಾಡುತ್ತಿದ್ದರು. ಆದರೆ, ಈಗ ಕವಿಗಳ ನಾಮಫಲಕಗಳು ಸಂಪೂರ್ಣ ಮುರಿದು ಮುಕ್ಕಾಗಿದ್ದು, ನೆಲ ಕಚ್ಚಿವೆ. ಇದನ್ನು ನೋಡಿಕೊಂಡೇ ನಿತ್ಯ ಗ್ರಾಮ ಪಂಚಾಯ್ತಿ ಸದಸ್ಯರು ತಿರುಗಾಡುತ್ತಾರೆ. ವಿಧಾನಸಭೆ ಚುನಾವಣೆಗೆ ಮತ ಕೇಳಲು ಶಾಸಕರು, ಮಾಜಿ ಶಾಸಕರು ಇದೇ ಕಲ್ಲುಗಳ ಬಳಿಯೇ ಓಡಾಡಿದರು. ಆದರೆ ಕವಿಗಳ ಹೆಸರಿನ ನಾಮಫಲಕಗಳ ದುಸ್ಥಿತಿ ಅವರ ಕಣ್ಣಿಗೆ ಬೀಳಲೇ ಇಲ್ಲ. ಕಳೆದ ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯ್ತಿ ಸದಸ್ಯೆ ಲತಾಗಂಗಯ್ಯ ಕನ್ನಡ ಕವಿಗಳ ನಾಮಫಲಕಗಳ ದುಸ್ಥಿತಿ ಚಿಂತಾಜನಕವಾಗಿದೆ. ಮಾಧ್ಯಮಗಳಲ್ಲಿ ವರದಿ ಬಂದು ನಗೆಪಾಟಲಿಗೆ ಒಳಗಾಗುವ ಮುನ್ನ ಅದನ್ನು ಸರಿಪಡಿಸಿ ಎಂದು ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು. ಸಭೆ ಅದಕ್ಕೆ ಸಮ್ಮತಿಯನ್ನೂ ಸೂಚಿಸಿತು. ಆದರೆ ಇದುವರೆಗೂ ಅದನ್ನು ಸರಿಪಡಿಸುವ ಕೆಲಸಕ್ಕೆ ಗ್ರಾಮ ಪಂಚಾಯಿತಿ ಮುಂದಾಗಲೇ ಇಲ್ಲ. ಕವಿಗಳ ಸ್ವಗತ: ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕೆ ನಾವು ಪುಣ್ಯವಂತರು ಎಂದೇ ಭಾವಿಸಿ, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಎಂದು ಬದುಕಿನ ಮಂತ್ರವಾಗಿಸಿಕೊಂಡಿದ್ದೆ ಆದರೆ ನನ್ನ ಹೆಸರನ್ನು ರಸ್ತೆಗಳಿಗೆ ಬೀದಿಗಳಿಗೆ ಇಡಿ ಎಂದು ನಾನೆಲ್ಲೂ ಕೇಳಿಲ್ಲ. ನಾನು ಅದನ್ನು ಕೀರ್ತಿ ಎಂದೇ ಭಾವಿಸಿದ್ದವನು. ಈಗ ನನ್ನ ಹೆಸರನ್ನು ರಸ್ತೆಗೆ ಇಟ್ಟು ಅದನ್ನು ಸರಿಯಾಗಿ ಕಾಪಾಡಿಕೊಳ್ಳದೇ ಹೋದರೆ ಅದು ತಪ್ಪಲ್ಲವೇ? ಎಂದು ಕುವೆಂಪು ಅವರ ಆತ್ಮ ನೊಂದು ಹೇಳಿರಬಹುದಾ? ಕನ್ನಡದ ಕವಿಗಳ ಹೆಸರುಗಳನ್ನು ಹೋಬಳಿ ಕೇಂದ್ರದಲ್ಲಿ ಬರೆಸಿದ್ದೀರಿ ಎಂಬುದು ಗೊತ್ತಾದಾಗ ನನಗೆ ಶ್ರಾವಣ ಬಂದು ಕಾಡಿಗೆ ಬಂತು ನಾಡಿಗೆ ಬಂದು ಬೀಡಿಗೆ ಓ ಬಂತು ಶ್ರಾವಣ ಎಂಬ ಪದ್ಯ ನೆನಪಾಯಿತು. ಆದರೆ ಅದು ಇಂದು ಚರಂಡಿ ಕಲ್ಲಾಗಿ ಮುರಿದು ಬಿದ್ದು ಸಂಕಟದಿಂದ ಅದು ನನ್ನನ್ನು ನೋಡಿದಾಗ ನೀ ಹೀಂಗ ನೋಡಬೇಡ ನನ್ನ ನಾ ಹ್ಯಾಂಗ ನೋಡಲಿ ನಿನ್ನ ಎಂದು ನೊಂದು ಹಾಡಬೇಕೆನಿಸುತ್ತದೆ ಎಂದು ಬೇಂದ್ರೆ ಅಜ್ಜನ ಆತ್ಮ ತನ್ನೊಳಗೆ ತಾನೇ ಕೊರಗಿರಬಹುದಾ? ನಿಮಗೆ ಹೇಗೆ ಬೈದರೂ ಬುದ್ದಿ ಬರಲ್ಲ, ನಾ ಬದುಕಿದ್ದಾಗಲೇ ಹೆಸರು ಇಟ್ಟಿರಿ ಖುಷಿಯಾಯ್ತು. ಅನ್ನದಾತರು ನೀವು. ಆದರೆ ನಾ ಸತ್ತ ನಂತರ ಕೇಳೋರಿಲ್ಲ, ನಾಟಕ ಮಾಡಿ ಉಗಿಯೋರಿಲ್ಲ ಅಂತ ಕನ್ನಡಕ್ಕಾಗಿ ಎಲ್ಲವನ್ನೂ ಅರ್ಪಣೆ ಮಾಡಿ ಭಾಷೆಯನ್ನು ಶ್ರೀಮಂತ ಮಾಡಿದ ಕವಿಗಳ ನಾಮಫಲಕಗಳನ್ನು ಸರಿಮಾಡದೇ ಹೋದರೆ ನಿಮಗ್ಯಾಗೋ ಅಧಿಕಾರ ಅಂತ ಕೇಳಬೇಕು ಅನಿಸ್ತಿಗೆ. ಆದರೆ ನಿಮಗೆ ಅಧಿಕಾರದ ಮದದಲ್ಲಿ ಕಿವಿಯೇ ಕೇಳಿಸ್ತಿಲ್ಲವಲ್ಲ ಎಂದು ಮಾಸ್ಟರ್ ಹಿರಣ್ಣಯ್ಯರವರು ಕೋಪಗೊಂಡಿರಬಹುದೇ? ಕನ್ನಡದ ನಾಮಪಲಕಗಳು ಅಭಿಮಾನದ ವಿಷಯವಾಗಬೇಕು. ಅದನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಮತ್ತು ಶಾಸಕರು ಎಚ್ಚೆತ್ತು ಕನ್ನಡದ ನಾಮಫಲಕಗಳನ್ನು ಬರೆಸಿ ಮುರಿದು ಬಿದ್ದಿರುವ ಕಲ್ಲುಗಳನ್ನು ಸರಿಪಡಿಸಿ ಇಂದಿನ ಮಕ್ಕಳಿಗೆ ಮತ್ತು ತರುಣರಿಗೆ ಅಭಿಮಾನದ ಸಂಗತಿಯಾಗುವಂತೆ ಮಾಡಬೇಕಾಗಿದೆ. ಕೋಟ್ ............. ಈ ಸಂಬಂಧವಾಗಿ ಸಭೆಯಲ್ಲಿ ಚರ್ಚೆಯಾಗಿದೆ. ನಾಮಫಲಕಗಳು ಪದೇಪದೇ ಮುರಿದು ಬೀಳದಂತೆ ಕಬ್ಬಿಣದ ರಾಡುಗಳನ್ನು ಹಾಕಿಸಿ ಕವಿಗಳ ಫೋಟೋಗಳನ್ನು ಬರೆಸಿ ಹಾಕಿಸುವ ಕೆಲಸಕ್ಕೆ ಸದ್ಯದಲ್ಲಿಯೇ ಚಾಲನೆ ನೀಡುತ್ತೇವೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕೆಲಸ ತಡವಾಯಿತು. -ವೆಂಕಟೇಶ್, ಪಿಡಿಒ, ಕುದೂರು ಗ್ರಾಪಂ ಕೋಟ್ ......... ಕುದೂರು ಗ್ರಾಮ ಪ್ರಜ್ಞಾವಂತರಿರುವ ಗ್ರಾಮ ಎಂಬ ಹೆಗ್ಗಳಿಕೆ ಮೊದಲಿನಿಂದಲೂ ಇದೆ. ರಾಮನಗರ ಜಿಲ್ಲೆಯಲ್ಲಿಯೇ ಹೋಬಳಿ ಕೇಂದ್ರದಲ್ಲಿ ಎಲ್ಲಾ ರಸ್ತೆಗಳಿಗೆ ಕನ್ನಡದ ಕವಿಗಳ ಹೆಸರುಗಳನ್ನು ಇಟ್ಟು ಹೆಸರಾದವರು. ಆದರೆ ಅದನ್ನು ಕಾಪಾಡಿಕೊಳ್ಳುವ ಕೆಲಸಕ್ಕೆ ಮುಂದಾಗದೇ ಇರುವುದು ನನಗೆ ಆಶ್ಚರ್ಯ ಎನಿಸುತ್ತಿದೆ. ಇನ್ನಾದರೂ ಎಚ್ಚರಗೊಂಡು ನಾಮಫಲಕಗಳನ್ನು ಸರಿಪಡಿಸಲು ಮನವಿ ಮಾಡುತ್ತಿದ್ದೇವೆ. -ಬಿ.ಟಿ.ನಾಗೇಶ್, ಅಧ್ಯಕ್ಷ, ಜಿಲ್ಲಾ ಕಸಾಪ 31ಕೆಆರ್ ಎಂಎನ್ 8,9,10.ಜೆಪಿಜಿ ಕುದೂರು ಗ್ರಾಮದ ರಸ್ತೆಗಳಲ್ಲಿ ಮುರಿದು ಬಿದ್ದಿರುವ ಕನ್ನಡ ಕವಿಗಳ ನಾಮಫಲಕಗಳು.