ಜೋಡೆತ್ತಿನ ರೈತರಿಂದ ನಂದಿ ಸತ್ಯಾಗ್ರಹ ಆರಂಭ

KannadaprabhaNewsNetwork | Published : Feb 28, 2025 12:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಸಂಸಾರಿಕ ಹಾಗೂ ಆಧ್ಯಾತ್ಮಿಕ ಜೀವನದ ಪ್ರಗತಿಗೆ ಮೂಲ ಕಾರಣೀಭೂತವಾದ ನಂದಿ ಕೃಷಿ ಕುರಿತು ವೈಜ್ಞಾನಿಕ ಚಿಂತನೆ ಮಾಡುವುದು. ನಂದಿ ಸಂತತಿ ಉಳಿಸಿ ಬೆಳೆಸಲು ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಆಗ್ರಹಿಸಿ ಹನ್ನೊಂದು ದಿನಗಳ ಕಾಲ ನಂದಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ನಂದಿ ಸತ್ಯಾಗ್ರಹದ ನೇತೃತ್ವ ವಹಿಸಿರುವ ಬಸವರಾಜ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಂಸಾರಿಕ ಹಾಗೂ ಆಧ್ಯಾತ್ಮಿಕ ಜೀವನದ ಪ್ರಗತಿಗೆ ಮೂಲ ಕಾರಣೀಭೂತವಾದ ನಂದಿ ಕೃಷಿ ಕುರಿತು ವೈಜ್ಞಾನಿಕ ಚಿಂತನೆ ಮಾಡುವುದು. ನಂದಿ ಸಂತತಿ ಉಳಿಸಿ ಬೆಳೆಸಲು ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಆಗ್ರಹಿಸಿ ಹನ್ನೊಂದು ದಿನಗಳ ಕಾಲ ನಂದಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ನಂದಿ ಸತ್ಯಾಗ್ರಹದ ನೇತೃತ್ವ ವಹಿಸಿರುವ ಬಸವರಾಜ ಬಿರಾದಾರ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನ ದೇಶದಲ್ಲಿ ಮುಂದಿನ ದಿನಗಳಲ್ಲಿ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾದರೆ ಮಾತ್ರಿ ಸಮಾಜದಲ್ಲಿ ಪ್ರಗತಿ ಸಾಧ್ಯ. ಸಮಾಜದ ಮುಖ್ಯವಾಹಿನಿಗೆ ತಂದು ಜೋಡೆತ್ತಿನ ಕೃಷಿಗೆ ಪೂರಕ ವ್ಯವಸ್ಥೆ ನಿರ್ಮಾಣ ಮಾಡಿಕೊಳ್ಳುವುದು ಅಗತ್ಯವಿದೆ. ಹನ್ನೊಂದು ದಿನಗಳ ಕಾಲ ನಡೆಯುವ ಈ ಸತ್ಯಾಗ್ರಹದಲ್ಲಿ ಜಗತ್ತಿನ ಯಾವುದಾದರೂ ವಿಶ್ವವಿದ್ಯಾಲಯದ ಪ್ರತಿನಿಧಿ ಆಗಮಿಸಿ ನಂದಿ ಕೃಷಿ ಪುನಶ್ಚೇತನ ವಿಷಯವನ್ನು ಅಲ್ಲಗಳೆದು ಸಮಾಜದ ಪ್ರಗತಿಗೆ ಪೂರಕವಾದ ಇನ್ನೂ ಶ್ರೇಷ್ಠ ಯೋಜನೆಯನ್ನು ಪ್ರಸ್ತುತ ಪಡಿಸಿದರೆ ಆ ಕ್ಷಣವೇ ನಂದಿ ಸತ್ಯಾಗ್ರಹವನ್ನು ಮೊಟಕು ಗೊಳಿಸಲಾಗುವುದು. ಇಲ್ಲದೇ ಹೋದರೆ ಕೇಂದ್ರ, ರಾಜ್ಯ ಸರ್ಕಾರಗಳು ನಂದಿ ಸತ್ಯಾಗ್ರಹಿಗಳ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಸವಾಲು ಹಾಕಿದರು.

ಜೋಡೆತ್ತಿನ ಕೃಷಿಕರ ಶ್ರಮ ಹಾಗೂ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ, ಕೇಂದ್ರ ಸರ್ಕಾರಗಳು ಜಂಟಿಯಾಗಿ ಅನುದಾನ ಮೀಸಲಿಟ್ಟು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ ೧೧ ಸಾವಿರ ಪೋತ್ಸಾಹ ಧನ ನೀಡುವ ಯೋಜನೆ ಘೋಷಿಸಿ ನಂದಿ ಸಂಪತ್ತು ಕಾಸಾಯಿ ಖಾನೆಯ ಪಾಲಾಗುತ್ತಿರುವದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು.

ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಿಸಬೇಕಾದ ಅವಶ್ಯಕತೆ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿ ಮುಂದಿನ ೧೦ ವರ್ಷಗಳವರೆಗೆ ಪ್ರತಿ ವರ್ಷ೧೦ ಪ್ರತಿಶತ ಬಜೆಟ್ ನಂದಿ ಕೃಷಿಕರಿಗಾಗಿ ಮೀಸಲಿಡುವ ಕಾನೂನು ಜಾರಿಗೆ ತರಲು ಪಕ್ಷಾತೀತವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷಾತೀತವಾಗಿ ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ನಂದಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಭರವಸೆ ನೀಡಬೇಕು. ಪ್ರತಿಯೊಂದು ಗ್ರಾಮದಲ್ಲಿನ ಜೋಡೆತ್ತಿನ ರೈತ ಬಾಂಧವರು ತಮ್ಮ ಭಾಗದ ಶ್ರೀಗಳೊಂದಿಗೆ ಈ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ನಂದಿ ಸತ್ಯಾಗ್ರಹವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಈ ಸತ್ಯಾಗ್ರಹದಲ್ಲಿ ರೈತ ಸಂಘದ ಶಂಕರಗೌಡ ಹಿರೇಗೌಡರ, ಬಸವರಾಜ ಕೋನರೆಡ್ಡಿ, ಬಸವರಾಜ ಸಂಗಮ, ವಿಶ್ವನಾಥ ಮನಗೂಳಿ, ಬಸಪ್ಪ ನಾಗರಾಳ, ರಾಜು ಕುಮಶಿ, ಸಂಗು ಮಸಬಿನಾಳ, ಬಸು ಜೋಗಿ, ಪರಸಪ್ಪ ಕರಭಂಟನಾಳ, ಮಲ್ಲಪ್ಪ ಕಾಟಕ, ನೀಲಪ್ಪ ಅಂಗಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

Share this article