ಜೋಯಿಡಾ:
ತಾಲೂಕಿನ ನಂದಿಗದ್ದಾ ಗ್ರಾಮಕ್ಕೆ ಕಳೆದ 4 ತಿಂಗಳಿಂದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.ಅವರ್ಲಿ ಬಳಿ ಸೇತುವೆ ಹಾಳಾದ ಕಾರಣ ಸಾರಿಗೆ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಇದೀಗ ಈ ಸೇತುವೆ ಕೆಲಸ ಪ್ರಾರಂಭಿಸಿದ್ದು, ಪಕ್ಕದಲ್ಲಿ ಬದಲಿ ರಸ್ತೆ ಮಾಡಲಾಗಿದೆ. ಇಲ್ಲಿ ಎಲ್ಲ ವಾಹನಗಳು ಸಂಚರಿಸುತ್ತವೆ. ಅಲ್ಲದೆ ಭಾರವಾದ ವಾಹನಗಳು ಇದೇ ರಸ್ತೆಯಲ್ಲಿ ಬರುತ್ತಿದ್ದು , ಸಾರಿಗೆ ಬಸ್ ಬರಲು ಏನು ಸಮಸ್ಯೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಸರ್ಕಾರದ ಉಚಿತ ಬಸ್ ಪ್ರಯಾಣ ಈ ಭಾಗದ ಮಹಿಳೆಯರಿಗೆ ದೊರೆಯದಾಗಿದ್ದು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಅಲ್ಲದೇ ಈ ಭಾಗದ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು, ಅನಾರೋಗ್ಯ ಪೀಡಿತರಿಗೆ, ಬಡವರಿಗೆ ಬಸ್ ಇಲ್ಲದೆ ಸಮಸ್ಯೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಲಕ್ಷ್ಯ ವಹಿಸಿ ಬಸ್ ಬಿಡುವಂತೆ ಮಾಡಿಕೊಡಬೇಕಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ತಹಸೀಲ್ದಾರ್ ಮಂಜುನಾಥ ಮುನ್ನೋಳಿ, ಈ ಬಗ್ಗೆ ಜೋಯಿಡಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಸೇತುವೆ ಪಕ್ಕದ ರಸ್ತೆಯಲ್ಲಿ ಬಸ್ ಬಿಡುವ ಹಾಗೆ ಇದ್ದರೆ ಕೂಡಲೇ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದರು.ದಾಂಡೇಲಿಯ ಡಿಪೋ ಮ್ಯಾನೇಜರ್ ಎಲ್.ಎಚ್. ರಾಥೋಡ ಮಾತನಾಡಿ, ತಾಲೂಕಾಡಳಿತ ಅಥವಾ ಲೋಕೋಪಯೋಗಿ ಇಲಾಖೆಯಿಂದ ನಮ್ಮ ಬಸ್ ಬಿಡಬಹುದು ಎಂದು ಪತ್ರ ಹಾಕಿದಲ್ಲಿ ತಕ್ಷಣ ಬಸ್ ಓಡಿಸುತ್ತೇವೆ ಎಂದು ತಿಳಿಸಿದ್ದಾರೆ. ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯಕಳೆದ ಹಲವು ತಿಂಗಳಿಂದ ಬಸ್ ಸಂಚರಿಸದೆ ಇರುವುದರಿಂದ ಸಮಸ್ಯೆ ತೀವ್ರವಾಗಿದೆ. ಸೇತುವೆ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆಯಲ್ಲಿ ಬಸ್ ಓಡಿಸಲು ಅವಕಾಶವಿದ್ದರೂ ಬಿಡುತ್ತಿಲ್ಲ. ಇದಕ್ಕೆ ದಾಂಡೇಲಿ ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಕಾರಣ. ಮೊದಲಿನಂತೆ ದಾಂಡೇಲಿ ಹಾಗೂ ಯಲ್ಲಾಪುರಕ್ಕೆ ದಿನದ ಎರಡು ಬಸ್ ಬಿಡುವ ಮೂಲಕ ನೆರವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.