ಬೆಂಗಳೂರು : ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಪ್ರಕರಣ ಸಂಬಂಧ ದಂಪತಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಮೈಸೂರಿನ ವಿಜಯನಗರ ವಾಸವಾಗಿರುವ ಶಿವಕುಮಾರ್ ಹಾಗೂ ರಮ್ಯಾ ದಂಪತಿ ಬಂಧನಕ್ಕೊಳಗಾದವರು. ಇದೇ ಪ್ರಕರಣದಲ್ಲಿ ಈ ಹಿಂದೆ ನಂದಿನಿ ಉತ್ಪನ್ನದ ಅಧಿಕೃತ ಮಾರಾಟಗಾರ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಬಂಧಿತ ದಂಪತಿ ನಕಲಿ ತುಪ್ಪ ತಯಾರಿಸುವುದಕ್ಕಾಗಿಯೇ ತಮಿಳುನಾಡಿನ ತಿರುಪತ್ತೂರಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕಾರ್ಖಾನೆ ತೆರೆದು, ನಂದಿನಿ ಬ್ರ್ಯಾಂಡ್ ಅನ್ನು ನಕಲಿಯಾಗಿ ಮಾಡಿ ಮಾರುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್ ಪ್ರೈಸಸ್ ಎಂಬ ಗೋದಾಮಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಹಾಗೂ ಕೆಎಂಎಫ್ ಜಾಗೃತದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ನ.14 ರಂದು ದಾಳಿ ನಡೆಸಿ ನಂದಿನಿ ಉತ್ಪನ್ನಗಳ ಅಧಿಕೃತ ಮಾರಾಟಗಾರ ಮಹೇಂದ್ರ, ಈತನ ಪುತ್ರ ದೀಪಕ್, ತಮಿಳುನಾಡು ಮೂಲದ ಮುನಿರಾಜು ಹಾಗೂ ಅಭಿ ಅರಸು ಎಂಬುವರನ್ನು ಬಂಧಿಸಿತ್ತು. ಅವರಿಂದ 1.26 ಕೋಟಿ ರು. ಮೌಲ್ಯದ 8,136 ನಂದಿನಿ ಹೆಸರಿನ ಕಲಬೆರಕೆ ತುಪ್ಪ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು.'
ಬಂಧನಕ್ಕೊಳಗಾಗಿದ್ದ ಆರೋಪಿಗಳ ವಿಚಾರಣೆಯಲ್ಲಿ ಶಿವಕುಮಾರ್ ದಂಪತಿಯು 2021ರಿಂದ ತಮಿಳುನಾಡಿನಲ್ಲಿ ಕಾರ್ಖಾನೆ ತೆರೆದು ವಂಚಿಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದರು.
ಕೆಎಂಎಫ್‌ನ ಉತ್ಪನ್ನಗಳ ಅಧಿಕೃತ ಮಾರಾಟಗಾರ ಮಹೇಂದ್ರ, ತಾನೂ ಖರೀದಿಸುತ್ತಿದ್ದ ಅಸಲಿ ತುಪ್ಪವನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಮುನಿರಾಜು ಹಾಗೂ ಅಭಿ ಅಸಲಿ ತುಪ್ಪಕ್ಕೆ ಪಾಮ್ ಆಯಿಲ್ ಎಣ್ಣೆ ಸೇರಿ ಇತರೆ ವಸ್ತುಗಳನ್ನು ಕಾರ್ಖಾನೆಯಲ್ಲಿ ಮಿಶ್ರಣ ಮಾಡಿ ಪ್ಲಾಸ್ಟಿಕ್ ಬಾಟೆಲ್ ಹಾಗೂ ಸ್ಯಾಚೆಟ್‌ನಲ್ಲಿ ತುಂಬಿ ಪ್ಯಾಕ್ ಮಾಡಿ ನಗರದ ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ನಕಲಿ ತುಪ್ಪ ತಯಾರು ಮಾಡಲೆಂದೇ ದೊಡ್ಡ ಪ್ರಮಾಣದ ಯಂತ್ರೋಪಕರಣಗಳನ್ನು ತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಖಾತೆಯಲ್ಲಿದ್ದ 60 ಲಕ್ಷ ಹಣ ಫ್ರೀಜ್ ಮಾಡಲಾಗಿದೆ. ಪ್ರಕರಣದಲ್ಲಿ ಇದುವರೆಗೂ 1.88 ಕೋಟಿ ರು. ಮೌಲ್ಯದ ವಸ್ತುಗಳು, ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಂಪತಿ ವಿರುದ್ಧ ಮೈಸೂರಿನಲ್ಲಿ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಡಿಸಿಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದಾರೆ.