ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಲಯ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದ.ಕ.ಜಿಲ್ಲೆಯ ರೈಲ್ವೆ ಬಳಕೆದಾರರ ಸಮಿತಿ ಆನ್‌ಲೈನ್ ಮೂಲಕ ಸಹಿ ಅಭಿಯಾನ ಆರಂಭಿಸಿದೆ.ಮಂಗಳೂರು ದಕ್ಷಿಣ ಭಾರತದಲ್ಲೇ ಶರವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಕರ್ನಾಟಕ ರಾಜ್ಯದ ಕರಾವಳಿಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ, ಧಾರ್ಮಿಕ, ಪ್ರವಾಸಿ ನಗರ ಮಂಗಳೂರು. ಎಲ್ಲ ರೀತಿಯಲ್ಲೂ ದೇಶ, ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಕರ್ನಾಟಕ ರಾಜ್ಯದಲ್ಲಿ ರಸ್ತೆ, ರೈಲ್ವೆ, ವಿಮಾನ, ಜಲಸಾರಿಗೆ ಈ ನಾಲ್ಕು ವಿವಿಧ ಸಂಪರ್ಕಗಳನ್ನು ಹೊಂದಿದ ಏಕೈಕ ನಗರವಾಗಿದೆ. ಈ ನಗರವನ್ನು ಸಂಪರ್ಕಿಸುವ, ಹಾದುಹೋಗುವ ರೈಲುಗಳಿಗೆ ಪ್ರಸಕ್ತ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎಂಬ ಎರಡು ನಿಲ್ದಾಣಗಳಿವೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ರೈಲುಗಳ ಓಡಾಟ ಮಾತ್ರ ಇಲ್ಲ. ಹೀಗಾಗಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಲಯ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದ.ಕ.ಜಿಲ್ಲೆಯ ರೈಲ್ವೆ ಬಳಕೆದಾರರ ಸಮಿತಿ ಈ ಅಭಿಯಾನ ಆರಂಭಿಸಿದೆ.
ಅಭಿಯಾನ ಬುಧವಾರ ಆರಂಭವಾಗಿದ್ದು, ಆಗಸ್ಟ್ 2ರ ತನಕ ನಡೆಯಲಿದೆ. ಈ ಸಹಿ ಅಭಿಯಾನದಲ್ಲಿ ಭಾಗವಹಿಸಿ ನಮ್ಮ ಈ ಪ್ರಯತ್ನವನ್ನು ಜಿಲ್ಲೆಯ ಜನತೆ ಬೆಂಬಲಿಸುವಂತೆ ಸಮಿತಿ ಮನವಿ ಮಾಡಿದೆ.ಬೇಡಿಕೆ ಹಿನ್ನೆಲೆ: ರೈಲ್ವೆ ವಿಚಾರದಲ್ಲಿ ಮಂಗಳೂರು ಬೇರೆ ಪ್ರಮುಖ ನಗರಗಳಿಂದ ಹಿಂದೆ ಬಿದ್ದಿದೆ. ಪ್ರತ್ಯೇಕ ರೈಲ್ವೆ ವಿಭಾಗವಿಲ್ಲದೆ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ, ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಹಾಗೂ ಕೊಂಕಣ ರೈಲ್ವೆ ನಿಗಮದ ಮಧ್ಯೆ ಮಂಗಳೂರಿನ ರೈಲ್ವೆ ಜಾಲ ಹಂಚಿ ಹೋಗಿದೆ. ಇದರಿಂದ ಮಂಗಳೂರಿಗೆ ಸಿಗಬೇಕಾದ ಸೌಕರ್ಯಗಳು, ರೈಲ್ವೆ ಸೇವೆಗಳು ಇಲ್ಲವಾಗಿದೆ. ಹೀಗಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಹಾಗು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ಅನ್ನು ಪ್ರಮುಖ ರೈಲ್ವೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು, ಕರ್ನಾಟಕ ರಾಜ್ಯದ ಹಲವಾರು ನಗರಗಳಿಗೆ ಮಂಗಳೂರು ಸೆಂಟ್ರಲಿನಿಂದ ರೈಲು ಸೇವೆ ಆರಂಭಿಸಲು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗದ ನಿರ್ದೇಶಕ ಆಗಬೇಕಾಗಿದೆ. ಈಗಾಗಲೇ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆ ಇಲಾಖೆಯಡಿ ಸೇರಿಸಬೇಕೆಂಬ ಕೂಗು ಕೇಳಿಬರುತ್ತಿದೆ.
ಪ್ರಯೋಜನ ಏನು?:ಇದು ಕಾರ್ಯಸಾಧುವಾದರೆ ಮಂಗಳೂರಿನಿಂದ ಮಡಗಾಂವ್ ತನಕ ಹಾಗೂ ಮಂಗಳೂರಿನಿಂದ ಸಕಲೇಶಪುರ, ಹಾಸನ ತನಕದ ರೈಲ್ವೆ ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್ ಅನ್ನು ಕೇಂದ್ರ ಸ್ಥಾನವಾಗಿ ಮಾಡಿ ಪ್ರತ್ಯೇಕ ರೈಲ್ವೆ ವಿಭಾಗದ ನಿರ್ಮಾಣವಾಗಬೇಕು. ಇದರಿಂದ ಕರಾವಳಿಯ ಜನರ ರೈಲ್ವೆ ಬೇಡಿಕೆಗಳು ಈಡೇರುವುದಲ್ಲದೆ, ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು, ರೈಲ್ವೆ ಹಳಿಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯದಿಂದ ಮಡಗಾಂವ್ ತನಕದ ಕರಾವಳಿಯ ರೈಲ್ವೆ ಜಾಲದಲ್ಲಿ ಹೊಸ ರೈಲು ಸೇವೆ ಆರಂಭಿಸಲು ಮೂರು ವಿಭಾಗಗಳ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಹೀಗಾಗಿ ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಶೀಘ್ರದಲ್ಲಿ ನಿರ್ಮಾಣವಾಗಬೇಕು. ಹೀಗಾಗಿ ಇದರ ಬಗ್ಗೆ ಧ್ವನಿ ಎತ್ತಲು ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಬಳಕೆದಾರರ ಸಮಿತಿಯ ವತಿಯಿಂದ ಸಹಿ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಲಾಗಿದೆ.
---------------