ಕನ್ನಡಪ್ರಭ ವಾರ್ತೆ ನಂಜನಗೂಡು
ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ಶುಕ್ರವಾರ ಮುಂಜಾನೆಯಿಂದಲೇ ಅಮ್ಮನವರಿಗೆ ಹಾಲು, ಮೊಸರು, ಜೇನುತುಪ್ಪ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ಸಾಂಗೋಪವಾಗಿ ನೆರವೇರಿಸಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ದೇವಾಲಯದ ಸುತ್ತಮುತ್ತ ಹಾಗೂ ದೇವಾಲಯದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿ ಧನ್ಯತಾಭಾವದಿಂದ ಭಾವ ಪರವಶರಾದರು.ಮುಂಜಾನೆಯಿಂದಲೇ ಭಕ್ತಾದಿಗಳು ಅಮ್ಮನ ದರ್ಶನ ಪಡೆಯಲು ಉದ್ದನೆಯ ಸಾಲಿನಲ್ಲಿ ನಿಂತು ದೇವಾಲಯದ ಆವರಣದಲ್ಲಿ ನಿಂಬೆಹಣ್ಣಿನ ದೀಪದ ಆರತಿ ಮಾಡಿ ಹರಕೆ ತೀರಿಸಿ, ಮುತೈದೆಯರು ಬನ್ನಿ ಮರವನ್ನು ಪ್ರದಕ್ಷಿಣೆ ಮಾಡಿ ಮುತ್ತೈದೆಯರಿಗೆ ಬಳೆ ಅರಿಸಿನ ಕುಂಕುಮ ಭಾಗೀನ ನೀಡಿ, ಮದುವೆಯಾಗದ ಮಹಿಳೆಯರು ಕಂಕಣ ಭಾಗ್ಯ ಕೂಡಿ ಬರಲಿ ಎಂದು ದೀಪ ಹಚ್ಚಿದರೆ ಮದುವೆಯಾದವರು ಮಕ್ಕಳ ಭಾಗ್ಯ ದೊರಕಿಸುವಂತೆ ಹರಕೆ ಕಟ್ಟುವ ದೃಶ್ಯ ಸಾಮಾನ್ಯವಾಗಿತ್ತು. ವಿವಿಧ ಸಂಘ ಸಂಸ್ಥೆಗಳವರು ಪ್ರಸಾದ ವಿನಿಯೋಗ ಮಾಡಿದರು.
ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಶ್ರೀಕಂಠೇಶ್ವರಸ್ವಾಮಿ ದೇಗುಲದ ಇಓ ಜಗದೀಶ್ ನೇತೃತ್ವದಲ್ಲಿ ಸುಗಮ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಿತ್ತು.-------------