ವಿಶ್ವಕರ್ಮರಿಗೆ ಬಜೆಟ್ಟಲ್ಲಿ ಪ್ರತ್ಯೇಕ ಪ್ಯಾಕೇಜ್‌ಗೆ ನಂಜುಂಡಿ ಒತ್ತಾಯ

KannadaprabhaNewsNetwork |  
Published : Feb 02, 2026, 02:00 AM IST
ಹಿರಿಯ ನಾಗರಿಕರ ಜಾಗೃತಿ ಸಭೆ | Kannada Prabha

ಸಾರಾಂಶ

ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೆಜ್‌ ಘೋಷಣೆ ಮಾಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೆಜ್‌ ಘೋಷಣೆ ಮಾಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಆಗ್ರಹಿಸಿದ್ದಾರೆ.

ಭಾನುವಾರ ಸಮಾಜದ ಹಿರಿಯ ನಾಗರಿಕರ ಜಾಗೃತಿ ಸಭೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಬಜೆಟ್‌ ತಯಾರಿಯಲ್ಲಿದೆ. ಬಜೆಟ್‌ನಲ್ಲಿ ಸಮುದಾಯದತ್ತ ಸರ್ಕಾರ ಗಮನ ಕೊಡಬೇಕು. ಈ ಬಜೆಟ್‌ನಲ್ಲಿ ವಿಶ್ವಕರ್ಮರಿಗೆ ವಿಶೇಷ ಅನುದಾನ ನೀಡಬೇಕು. ಸರ್ಕಾರ ಸೌಲಭ್ಯ ಕೊಡುವವರೆಗೆ, ಮೀಸಲಾತಿ ಸಾಮಾಜಿಕ ನ್ಯಾಯ ನೀಡುವವರೆಗೆ ಎಲ್ಲ ಜಿಲ್ಲೆಯ ವಿಶ್ವಕರ್ಮರು ಒಗ್ಗಟ್ಟಾಗಿ ಹೋರಾಟ ಮುಂದುವರಿಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯದ 40 ಲಕ್ಷ ಜನರಿದ್ದೇವೆ. ಕುರುಬ ಸಮುದಾಯದ ಬಳಿಕ 2ನೇ ಅತಿದೊಡ್ಡ ಜನಸಂಖ್ಯೆಯಲ್ಲಿ ನಾವಿದ್ದೇವೆ. ರಾಜಕೀಯ ನಿರ್ಲಕ್ಷ್ಯ, ಸಾಮಾಜಿಕ ನ್ಯಾಯದಿಂದ ನಾವು ಹೊರಗಿರುವುದರಿಂದ ನಮ್ಮನ್ನು 8 ಲಕ್ಷಕ್ಕೆ ಇಳಿಸಲಾಗಿದೆ. ಸಂವಿಧಾನಬದ್ಧ ಅವಕಾಶದಿಂದ ವಂಚಿತರಾಗಿರುವುದಕ್ಕೆ ಸಮಾಜ ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಕ್ಷರಶಃ ಬೀದಿಗೆ:

ಚಿನ್ನ ಬೆಳ್ಳಿ ಕೆಲಸ ಮಾಡುವ ಸಮಾಜದವರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಬಹುರಾಷ್ಟ್ರೀಯ ಕಂಪನಿಗಳು ಆಭರಣ ಮಳಿಗೆ ನಡೆಸುತ್ತಿವೆ. ಯಾರೂ ಅಕ್ಕಸಾಲಿಗರಿಗೆ ಚಿನ್ನ ಕೊಟ್ಟು ಆಭರಣ ಮಳಿಗೆ ಮಾಡಿಸಿಕೊಳ್ಳುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದರೂ ಸಮಾಜ ಬಡತನಕ್ಕೆ ಬರುವಂತಾಗಿದೆ. ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಆಗುತ್ತಿಲ್ಲ. ಹಿಂದುಳಿದ ವರ್ಗದ ಪರ ಎಂದವರೇ ಸಮಾಜವನ್ನು ನಿರ್ಲಕ್ಷಿಸುತ್ತಿದ್ದು, ಯಾವುದೇ ವಿಶೇಷ ಸೌಲಭ್ಯ ಸಿಗುತ್ತಿಲ್ಲ ಎಂದು ಕಿಡಿಕಾರಿದರು.ಹಂಪಿ ಉತ್ಸವದಲ್ಲಿ ನಿರ್ಲಕ್ಷ್ಯ:

ಹಂಪಿ ಉತ್ಸವದಲ್ಲಿ ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದೆ. 977ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಅವಕಾಶ ಇದ್ದರೂ ಹಾವನೂರು ಆಯೋಗದಿಂದ ವಿಶ್ವಕರ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಯಿತು. ಈ ತಪ್ಪು ಸರಿಪಡಿಸಲು ಕುಲಶಾಸ್ತ್ರೀಯ ಅಧ್ಯಯನ ಮಾಡಲು ಒತ್ತಾಯಿಸಿದರೆ ಆ ವರದಿಯಲ್ಲಿ ನಾವು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಲಕ್ಷಣವಿಲ್ಲ ಎಂದು ಬರೆಯಲಾಗಿದೆ. ಇದರ ಹಿಂದಿನ ಹುನ್ನಾರ ಏನು ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.-ಬಾಕ್ಸ್-

ಮಾರ್ಚ್‌ನಲ್ಲಿ ಹಿರಿಯ ನಾಗರಿಕರ ಸಮಾವೇಶ:ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ, ಮೀಸಲಾತಿ ನೀಡುವಲ್ಲಿ ನಿರ್ಲಕ್ಷ್ಯ ವಿರೋಧಿಸಿ ಶೀಘ್ರ ಬೆಂಗಳೂರಿನಲ್ಲಿ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರ ರಾಜ್ಯಮಟ್ಟದ ಸಮಾವೇಶವನ್ನು ಮಾರ್ಚ್‌ನಲ್ಲಿ ಆಯೋಜಿಸಲಾಗುವುದು. ಸಮಾವೇಶದ ಮೂಲಕ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯದ ಕುರಿತು ಒತ್ತಾಯಿಸಲಿದ್ದೇವೆ. ಅದಾದ ಬಳಿಕವೂ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಬೀದರ್‌ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಗುವುದು ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ